ಇನ್ನು ವಾಹನ, ಗೃಹ, ಉದ್ಯಮ ಸಾಲ ತುಟ್ಟಿ

ಹೊಸದಿಲ್ಲಿ, ಜೂ.7: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಏರಿಕೆ ಮಾಡಿದ ಒಂದು ದಿನದ ಬಳಿಕ ಬ್ಯಾಂಕ್‌ಗಳೂ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಲು ಆರಂಭಿಸಿದ್ದು, ಇದರಿಂದ ವಾಹನ ಸಾಲ, ಗೃಹ ಸಾಲ ಮತ್ತು ಉದ್ಯಮ ಸಾಲದ ಮೇಲಿನ ಬಡ್ಡಿದರ ಹೆಚ್ಚಲಿದೆ. ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ ಮುಂತಾದ ಕೆಲವು ಬೃಹತ್ ಬ್ಯಾಂಕ್‌ಗಳು ಎಂಸಿಎಲ್‌ಆರ್ ಬಡ್ಡಿದರವನ್ನು ಹೆಚ್ಚಿಸಿವೆ. ಇದೇ ರೀತಿ ಇಂಡಿಯನ್ ಬ್ಯಾಂಕ್ ಹಾಗೂ ಕರೂರ್ ವೈಶ್ಯ ಬ್ಯಾಂಕ್ ಕೂಡಾ ಎಂಸಿಎಲ್‌ಆರ್ ಬಡ್ಡಿದರವನ್ನು 10 ಮೂಲ ಅಂಕಗಳಷ್ಟು ಹೆಚ್ಚಿಸುವುದಾಗಿ ಸ್ಟಾಕ್ ಎಕ್ಸ್‌ಚೇಂಜ್‌ಗೆ ಮಾಹಿತಿ ನೀಡಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಇಂಡಿಯನ್ ಬ್ಯಾಂಕ್ 3 ತಿಂಗಳಿನಿಂದ ಐದು ವರ್ಷಾವಧಿಯ ಎಂಸಿಎಲ್‌ಆರ್ ಬಡ್ಡಿದರವನ್ನು 10 ಮೂಲ ಅಂಕಗಳಷ್ಟು ಹೆಚ್ಚಿಸಿದೆ. ಕರೂರ್ ವೈಶ್ಯ ಬ್ಯಾಂಕ್ 6 ತಿಂಗಳಿನಿಂದ ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ಬಡ್ಡಿದರವನ್ನು 10 ಮೂಲ ಅಂಕಗಳಷ್ಟು ಹೆಚ್ಚಿಸಿದೆ. ಬಡ್ಡಿದರ ಹೆಚ್ಚಿಸುವುದಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡಾ ತಿಳಿಸಿದೆ. ಕಚ್ಛಾ ತೈಲದ ಬೆಲೆ ಸತತವಾಗಿ ಏರುತ್ತಿರುವುದು ಹಾಗೂ ಹಾಗೂ ವಿವಿಧ ರಾಜ್ಯಗಳು ಗೃಹಭತ್ತೆ ದರವನ್ನು ಪರಿಷ್ಕರಿಸಿರುವುದು ಹಣದುಬ್ಬರ ಏರಿಕೆಗೆ ಕಾರಣವಾಗುವ ಹಿನ್ನೆಲೆಯಲ್ಲಿ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದೆ. ಆರ್‌ಬಿಐಯ ಸಕಾಲಿಕ ಕ್ರಮ ಹಣದುಬ್ಬರದ ನಿರೀಕ್ಷೆಯನ್ನು ನಿರೀಕ್ಷೆಯಾಗಿಯೇ ಮುಂದುವರಿಸಲಿದೆ ಹಾಗೂ ಆರ್ಥಿಕ ಸದೃಢತೆಗೆ ಕಾರಣವಾಗಲಿದೆ ಎಂದು ಪ್ರಮುಖ ಬ್ಯಾಂಕ್‌ಗಳು ತಿಳಿಸಿವೆ.





