'ಸಂಘ ಪರಿವಾರ-ಪೊಲೀಸರ ಕಾನೂನು ಬಾಹಿರ ಸಂಬಂಧ ಬಯಲು'
ಪೆರ್ಡೂರು ಪ್ರಕರಣದ ಕುರಿತು ಕೋಸೌವೇ

ಉಡುಪಿ, ಜೂ.7: ದನ ಸಾಗಾಟದ ವಿಷಯದಲ್ಲಿ ಹಲ್ಲೆ, ಸಾವುಗಳ ಘಟನೆ ಕರಾವಳಿಗೆ ಹೊಸ ಸುದ್ದಿಗಳೇನಲ್ಲ. ಆದಿ ಉಡುಪಿ ಬೆತ್ತಲೆ ಪ್ರಕರಣ, ಬಾರಕೂರು ಸಮೀಪ ಕೃಷ್ಣಯ್ಯ ಪಾಠಾಳಿ, ಕೆಂಜಾರಿನ ಪ್ರವೀಣ್ ಪೂಜಾರಿ ಹತ್ಯೆ ಘಟನೆಯಂತೆ ಪೆರ್ಡೂರು ಹುಸೇನಬ್ಬರ ಪ್ರಕರಣವೂ ಇದಕ್ಕೊಂದು ಸೇರ್ಪಡೆ. ಆದರೆ ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ಸಂಘ ಪರಿವಾರದ ದಾಳಿಕೋರರು ಹಾಗೂ ಪೊಲೀಸರ ನಡುವಿನ ಕಾನೂನು ಬಾಹಿರ ಸಂಬಂಧವನ್ನು ಪೆರ್ಡೂರು ಪ್ರಕರಣ ಬಯಲುಗೊಳಿಸಿದೆ ಎಂದು ಉಡುಪಿ ಜಿಲ್ಲಾ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ, ಚಿಂತಕ ಜಿ.ರಾಜಶೇಖರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೇತೃತ್ವದ ತಂಡ, ಇದೇ ಮೊದಲ ಬಾರಿಗೆ ಸಂಘಪರಿವಾರ ಹಾಗೂ ಪೊಲೀಸ್ ಇಲಾಖೆಯ ನಡುವೆ ಕರಾವಳಿಯಲ್ಲಿರುವ ಕಾನೂನು ಬಾಹಿರ ಸಂಬಂಧವನ್ನು ಬಯಲು ಮಾಡಿದೆ ಎಂದವರು ತಿಳಿಸಿದರು.
ಇಲ್ಲಿನ ರೂಢಿಗೆ ವಿರುದ್ಧವಾಗಿ, ಸಂವಿಧಾನಿಕ ಕಾನೂನಿಗೆ ಬದ್ಧವಾಗಿ, ಕಾನೂನು ಕ್ರಮ ನಿರ್ವಹಿಸುವ ಮೂಲಕ ನಾಗರಿಕರ ಹಕ್ಕಿಗೆ ನೈತಿಕ ಬಲವನ್ನು ತಂದಿತ್ತ ಲಕ್ಷ್ಮಣ ನಿಂಬರಗಿ ಮತ್ತವರ ತಂಡದ ದಿಟ್ಟ ಕ್ರಮಕ್ಕೆ ನಾಗರಿಕ ಹಕ್ಕು ಹೋರಾಟ ವೇದಿಕೆಯಾಗಿ ಕೋಮು ಸೌಹಾರ್ದ ವೇದಿಕೆ ಹಾಗೂ ಸಹಭಾಗಿ ಸಂಘಟನೆಗಳು ವಂದನೆಯನ್ನು ಸಲ್ಲಿಸುತ್ತೇವೆ ಎಂದರು.
ಈ ಹಿಂದಿನ ಎಲ್ಲಾ ಪ್ರಕರಣಗಳಲ್ಲಿ, ಪ್ರತಿ ಘಟನೆಗಳಲ್ಲಿ ಸಂಘ ಪರಿವಾರ ಸಂಘಟನೆಗಳ ಕೃತ್ಯಗಳು ಮುಚ್ಚಿ ಹೋಗುತ್ತಿರುವುದಕ್ಕೆ ಪ್ರಮುಖ ಕಾರಣ, ಕರಾವಳಿಯ ಪೊಲೀಸರು ದಾಳಿಕೋರರ ಜೊತೆ ಶಾಮೀಲಾಗಿರುವುದು ಎಂಬುದನ್ನು ನಾವು 2000ದ ಬಳಿಕ ಪದೇ ಪದೇ ಹೇಳುತ್ತಾ ಬಂದಿದ್ದೇವೆ. ಕಳೆದ ವರ್ಷ ‘ಕೋಬ್ರಾ ಪೋಸ್ಟ್’ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಕರಾವಳಿಯ ಪ್ರಮುಖ ಬಿಜೆಪಿ ನಾಯಕರೊಬ್ಬರು ಕರಾವಳಿಯ ಪೊಲೀಸ್ ವ್ಯವಸ್ಥೆ ತಮ್ಮ ಪ್ರಭಾವದಲ್ಲಿದೆ ಎಂಬುದನ್ನು ನೇರವಾಗಿ ಹೇಳಿಕೊಂಡಿದ್ದರು. ಆದರೂ ಪೆರ್ಡೂರು ಘಟನೆಯವರೆಗೆ ಕಾನೂನು ರೀತ್ಯಾ ಈ ಅಕ್ರಮ ಹೊಂದಾಣಿಕೆ ಹೊರಬಂದಿರಲಿಲ್ಲ ಎಂದರು.
ಜೋಕಟ್ಟೆಯ ನಿವಾಸಿಯಾದ ಹುಸೇನಬ್ಬ ಕಳೆದ 35 ವರ್ಷಗಳಿಂದ ಪರವಾನಿಗೆ ಸಹಿತವಾಗಿ ದನ ಮಾರಾಟ ಮಾಡಲು ಆಸಕ್ತರಿಂದ ದನಗಳನ್ನು ಕೊಳ್ಳುವ ‘ಪೈರಿ’ನ ವೃತ್ತಿಯಲ್ಲಿದ್ದವರು. ಇದೊಂದು ಅವರಿಗೆ ಹೊಟ್ಟೆಪಾಡಿನ ವೃತ್ತಿ. ಅದೇ ರೀತಿ ಮೇ 30ರಂದು ಅವರು ಜಾನುವಾರು ಕೊಳ್ಳಲು ಬಂದಿದ್ದು, 31ರಂದು ಅವರ ಶವ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಹಾಡಿಯೊಂದರಲ್ಲಿ ಪತ್ತೆಯಾಗಿತ್ತು. ಪೊಲೀಸರು ಇದನ್ನು ಅಸಹಜ ಸಾವಿನ ಪ್ರಕರಣವೆಂದು ದಾಖಲಿಸಿಕೊಂಡಿದ್ದರು.
ಆದರೆ ಹುಸೇನಬ್ಬರ ಸಂಬಂಧಿಗಳು ಮೃತರ ಶವದ ಮೇಲಿದ್ದ ಗಾಯಗಳ ಹಿನ್ನೆಲೆಯಲ್ಲಿ ನೀಡಿದ ಕೊಲೆ ದೂರಿನ ಹಿನ್ನೆಲೆಯಲ್ಲಿ ಬಜರಂಗ ದಳ ‘ಅಕ್ರಮ ಜಾನುವಾರ ಸಾಗಾಟ’ದ ನೆಪದಲ್ಲಿ ನಡೆಸಿದ ದೈಹಿಕ ಹಲ್ಲೆ ಹಾಗೂ ಪೊಲೀಸರ ಬೆಂಬಲ ಬೆಳಕಿಗೆ ಬಂದಿದೆ. ಇದುವರೆಗೆ ಮೂವರು ಪೊಲೀಸರು ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ ಎಂದರು.
ಇದೀಗ ಕರಾವಳಿ ಪೊಲೀಸರು ಹಾಗೂ ಸಂಘಪರಿವಾರದ ದಾಳಿಕೋರರ ನಡುವಿನ ಕಾನೂನು ಬಾಹಿರ ಸಂಬಂಧ ಬಯಲಾಗುತಿದ್ದಂತೆ ಉಡುಪಿಯ ಸಂಸದೆ ಹಾಗೂ ಜಿಲ್ಲೆಯ ಶಾಸಕರು ದಕ್ಷ ಕಾನೂನು ವ್ಯವಸ್ಥೆ ವಿರುದ್ಧ ದಾಳಿಗೆ ಇಳಿದಿದ್ದಾರೆ. ಇದರಲ್ಲಿ ರಾಜ್ಯ ಮುಖ್ಯಮಂತ್ರಿಗಳ ಒತ್ತಾಯವಿದೆ ಎಂಬ ವದಂತಿಯನ್ನು ಹರಿಯಬಿಡುತಿದ್ದಾರೆ.
ಸಂವಿಧಾನ ಮೇಲೆ ಆಣೆ ಇರಿಸಿ ಅಧಿಕಾರ ಪಡೆದು, ಈ ಬಗೆಯ ಸಂವಿಧಾನ ಬದ್ಧ ಕಾನೂನು ಆಳ್ವಿಕೆಯ ಮೇಲೆ ಪ್ರಹಾರ ನಡೆಸುತ್ತಿರುವ ಜನಪ್ರತಿನಿಧಿಗಳ ಈ ವರ್ತನೆಯನ್ನು ವೇದಿಕೆ ಖಂಡಿಸುತ್ತದೆ ಎಂದು ರಾಜಶೇಖರ್ ನುಡಿದರು. ಅಲ್ಲದೇ ಈ ಹಲ್ಲೆ ಹಾಗೂ ಕೊಲೆಗಳಿಗೆ ‘ದನಗಳ್ಳತನವೇ ಕಾರಣ’ ಎಂದು ಅವರ ವಾದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಎಲ್ಲಾ ಸಂಪನ್ಮೂಲಗಳ ಕಳ್ಳತನ ದಂತೆ ದನಗಳ್ಳತನವೂ ಈ ಸಮಾಜದಲ್ಲಿ ಇರುವುದನ್ನು ನಾವು ನಿರಾಕರಿಸುವುದಿಲ್ಲ ಆದರೆ ಇಂಥ ಹಲ್ಲೆ, ಕೊಲೆಗಳ ಸಂದರ್ಭದಲ್ಲಿ ಜಾನುವಾರುಗಳ ಮಾಲಕರೇ ಜಾನುವಾರುಗಳನ್ನು ಮಾರಿದ್ದನ್ನು ‘ಕಳ್ಳತನ’ದ ನೆಪದಲ್ಲಿ ಮುಚ್ಚಿಹಾಕುವ ಹುನ್ನಾರು ನಡೆಯುತ್ತಿದೆ ಎಂದವರು ಆರೋಪಿಸಿದರು.
ಹಿಂದಿನ ಎಲ್ಲಾ ಪ್ರಕರಣಗಳಲ್ಲೂ ಬಲಪ್ರಯೋಗದ ಕಟ್ಟುಕತೆಗಳ ಮೂಲಕ ಹಲ್ಲೆ-ಕೊಲೆಗಳನ್ನು ಸಮರ್ಥಿಸುವ ಕೃತ್ಯಗಳನ್ನು ನಾವು ನೋಡುತಿದ್ದೇವೆ. ಈಗಲೂ ತನಿಖೆಯ ನೈಜತೆಯನ್ನು ಮುಚ್ಚುಹಾಕುವ ಪ್ರಯತ್ನದಲ್ಲಿ ಜನಪ್ರತಿನಿಧಿಗಳು ಸಂವಿಧಾನ ಬಾಹಿರ ದಾಳಿಕೋರರ ಜೊತೆ ಕೈಜೋಡಿಸುತ್ತಿ ರುವುದನ್ನು ವೇದಿಕೆ ಖಂಡಿಸುತ್ತದೆ ಎಂದರು.
ಲಕ್ಷ್ಮಣ ನಿಂಬರಗಿ ನೇತೃತ್ವದ ತನಿಖಾ ತಂಡ ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಆದರೆ ಆದಿಉಡುಪಿ ಬೆತ್ತಲೆ ಪ್ರಕರಣ, ಪಾಠಾಳಿ ಸೇರಿದಂತೆ ಎಲ್ಲಾ ಪ್ರಕರಣಗಳಲ್ಲಿ ಹಿಂಸೆಗೊಳಗಾದ ಹಾಗೂ ಹತ್ಯೆಗೊಳಗಾದ ಕುಟುಂಬಗಳಿಗೆ ನ್ಯಾಯ ದೊರಕಿಲ್ಲ. ಸಾಕ್ಷ್ಯ ನಾಶ, ಅದಕ್ಷ ನ್ಯಾಯಮಂಡನೆಯ ಮೂಲಕ ಈ ಕುಟುಂಬಗಳಿಗೆ ಅನ್ಯಾಯವೆಸಗಲಾಗುತ್ತಿದೆ. ಸರಕಾರ ಹಾಗೂ ಕಾನೂನು ವ್ಯವಸ್ಥೆಗಳು ಈ ವಿಷಯದಲ್ಲಿ ಬೇಜವಾಬ್ದಾರಿ ತೋರಿ ನ್ಯಾಯವನ್ನು ಮಣ್ಣು ಪಾಲು ಮಾಡಿವೆ. ಆದರೆ ಈ ಪ್ರಕರಣದಲ್ಲಿ ಹೀಗಾಗದಂತೆ ಜಾಗೃತೆ ವಹಿಸಬೇಕು ಹಾಗೂ ತನಿಖಾ ತಂಡ ಯಾವುದೇ ಒತ್ತಡಕ್ಕೂ ಮಣಿಯದೇ ತಾರ್ಕಿಕ ಅಂತ್ಯ ನೀಡಬೇಕು ಎಂದವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಫಣಿರಾಜ್, ವಂ.ವಿಲಿಯಂ ಮಾರ್ಟಿಸ್, ಯಾಸಿನ್ ಮಲ್ಪೆ, ರಾಬರ್ಟ್ ಮುಂತಾದವರು ಉಪಸ್ಥಿತರಿದ್ದರು.
ಪೊಲೀಸ್ ವ್ಯವಸ್ಥೆಗೆ ಕಾಯಕಲ್ಪಬೇಕು
ಪೆರ್ಡೂರು ಪ್ರಕರಣದ ಮೂಲಕ ಇಂದು ನಮ್ಮೆದುರು ಅನಾವರಣಗೊಂಡಿರುವುದು ಹಿಮಶಿಖರದ ತುದಿ ಮಾತ್ರ. ಕರಾವಳಿ ಪೊಲೀಸ್ ವ್ಯವಸ್ಥೆಯಲ್ಲಿ ಈ ಬಗೆಯ ಅಸಂವಿಧಾನಿಕ ಅಕ್ರಮ ಸಂಬಂಧದ ಪೊಲೀಸರನ್ನು ಪತ್ತೆ ಹಚ್ಚಿ, ಸಂವಿಧಾನಬದ್ಧ ಪೊಲೀಸರ ಸುಪರ್ದಿಗೆ ವಹಿಸದ ಹೊರತು ಇಂಥ ದಾರುಣ ಕೊಲೆಗಳಿಗೆ ಕೊನೆಯೇ ಇರದು ಎಂದು ಚಿಂತಕ ಕೆ.ಫಣಿರಾಜ್ ತಿಳಿಸಿದರು.
ಇಂಥ ಪ್ರಕರಣಗಳು ಮರುಕಳಿಸದಂತೆ ನೋಡಲು ಕರಾವಳಿಯ ಪೊಲೀಸ್ ವ್ಯವಸ್ಥೆಗೆ ಕಾಯಕಲ್ಪವಾಗಬೇಕು. ಕರಾವಳಿಯ ಕಾನೂನು ವ್ಯವಸ್ಥೆಗೆ ಸೂಕ್ತ ಸಂವಿಧಾನಬದ್ಧ ಚಿಕಿತ್ಸೆ ನೀಡಬೇಕೆಂದು ಅವರು ಗೃಹ ಸಚಿವರನ್ನು ಆಗ್ರಹಿಸಿದರು.
ಕರಾವಳಿಯ ಪೊಲೀಸು ವ್ಯವಸ್ಥೆಯನ್ನು ಸರ್ವ ನಾಗರಿಕರ ಬದುಕುವ ಹಕ್ಕನ್ನು ರಕ್ಷಿಸುವ ಸಲುವಾಗಿ ಸ್ವಚ್ಚಗೊಳಿಸಿ ಎಂದು ವೇದಿಕೆ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ ಎಂದು ಫಣಿರಾಜ್ ನುಡಿದರು.







