ಬಲಗೈ ಇಲ್ಲದ ಮಹಿಳೆಗೆ ನೆರವಾದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು,ಜೂ.07: ಜೆಪಿ ನಗರದ ತನ್ನ ನಿವಾಸದ ಮುಂದೆ ಇಂದು ಬೆಳಿಗ್ಗೆ ಬಲಗೈ ಇಲ್ಲದ ಮಹಿಳೆಯೋರ್ವರು ಮಗುವನ್ನು ಹಿಡಿದು ನಿಂತಿದ್ದನ್ನು ಕಂಡ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕೆಯನ್ನು ವಿಚಾರಿಸಿ, ಆಕೆಗೆ ಕೆಲಸ ಹಾಗೂ ಅಂಗವಿಕಲರ ಪೆನ್ಷನ್ ನೀಡುವಂತೆ ಸೂಚಿಸಿ ನೆರವಾದ ಘಟನೆ ನಡೆದಿದೆ.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸದ ಮುಂದೆ ನೂರಾರು ಜನರು ಅಹವಾಲುಗಳೊಂದಿಗೆ ಬಂದು ನಿಲ್ಲುವುದು ಪ್ರತಿದಿನದ ಸಂಗತಿಯಾಗಿದೆ. ಇಂದು ಬೆಳಿಗ್ಗೆ ಬಲಗೈ ಇಲ್ಲದ ಮಹಿಳೆಯೋರ್ವರು ಮಗು ಎತ್ತಿಕೊಂಡು ಮುಖ್ಯಮಂತ್ರಿಗಳ ಮನೆ ಮುಂದೆ ನಿಂತಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳು ಆಕೆಯನ್ನು ಏನಮ್ಮಾ? ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ “ನನ್ನ ಹೆಸರು ಶೈಲಾ, ದಾವಣಗೆರೆಯಿಂದ ಬಂದಿದ್ದೇನೆ, ಲಾರಿ ಅಪಘಾತದಲ್ಲಿ ನನ್ನ ಬಲಗೈ ಕತ್ತರಿಸಿ ಹೋಗಿದೆ, ಆದರೆ ಜೀವನ ನಡೆಸಲು ಬಲಗೈನಲ್ಲಿ ಬೆರಳಚ್ಚಿಸುವುದನ್ನು ಕಲಿತಿದ್ದೇನೆ, ನನಗೆ ಉದ್ಯೋಗ ಕೊಡಿಸಿ ಎಂದು ಮನವಿ ಮಾಡಿದರು.
ಈ ವೇಳೆ ಮುಖ್ಯಮಂತ್ರಿ ಆಕೆಯನ್ನು ವಿಧಾನಸೌಧಕ್ಕೆ ಬರುವಂತೆ ಸೂಚಿಸಿದರು. ನಂತರ ಆಕೆ ವಿಧಾನಸೌಧಕ್ಕೆ 11.30ಕ್ಕೆ ಆಗಮಿಸಿದರು. ಕೂಡಲೇ ಮುಖ್ಯಮಂತ್ರಿಗಳು ಆಕೆಯನ್ನು ಕರೆಸಿ, ತಾತ್ಕಾಲಿಕವಾಗಿ ದಾವಣಗೆರೆಯಲ್ಲಿ ಟೈಪಿಸ್ಟ್ ಹುದ್ದೆ ಕೊಡಲು ಸೂಚಿಸಿ, ಜೊತೆಗೆ ಆಕೆಗೆ ಅಂಗವಿಕಲರ ಪೆನ್ಷನ್ ನೀಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಸರ್ಕಾರಕ್ಕೆ ತಾಯಿ ಹೃದಯ ಇರಬೇಕು. ನಾವು ವ್ಯವಸ್ಥೆಯ ಒಳಗೆ ಏನೆಲ್ಲಾ ಕೆಲಸ ಮಾಡಲು ಸಾಧ್ಯವಿದೆ. ಆದರೆ ಅಸಂಘಟಿತ ವಲಯದಲ್ಲಿರುವ ವ್ಯಕ್ತಿಗಳಿಗೆ ಸಹಾಯ ನೀಡಲು ನಾವು ಕಾನೂನು ಚೌಕಟ್ಟುಗಳನ್ನು ಸ್ವಲ್ಪ ವಿಸ್ತರಿಸಿ ಕೆಲಸ ಮಾಡ ಬೇಕಾಗುತ್ತದೆ. ಈಕೆಯ ಕಷ್ಟ ನೋಡಿ ಮರುಗಿದ್ದೇನೆ. ಇಂತಹ ನೂರಾರು, ಸಹಸ್ರಾರು ಜನರಿದ್ದಾರೆ. ಇವರಿಗೆ ಉದ್ಯೋಗ ಒದಗಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದರು.







