ರಾಜ್ಯದಲ್ಲಿ ಕಾಲ ಸಿನೆಮಾ ಪ್ರದರ್ಶನ ಬಹುತೇಕ ರದ್ದು

ಬೆಂಗಳೂರು, ಜೂ.7: ವಿಶ್ವಾದ್ಯಂತ ರಜನಿಕಾಂತ್ ಅಭಿನಯದ ಕಾಲ ಸಿನೆಮಾ ಯಶಸ್ವಿ ಪ್ರದರ್ಶಗೊಂಡರೆ, ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಿಗದಿಗೊಂಡಿದ್ದ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಕಾಲ ಸಿನೆಮಾ ಪ್ರದರ್ಶನ ರದ್ದುಗೊಂಡಿತು.
ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ನಟ ರಜನಿಕಾಂತ್ ರಾಜ್ಯದ ವಿರುದ್ಧವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ಕಾಲ ಸಿನೆಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲವೆಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಚಿತ್ರಮಂದಿಗಳಲ್ಲಿ ಕಾಲ ಸಿನೆಮಾ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ.
ರಾಜ್ಯದಲ್ಲಿ 100ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಕಾಲ ಸಿನೆಮಾದ ಬಿಡುಗಡೆ ನಿಗದಿಯಾಗಿತ್ತು. ಈ ಸಲುವಾಗಿ ಎಲ್ಲ ಚಿತ್ರ ಮಂದಿರಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ, ಚಿತ್ರಮಂದಿರಗಳು ಮತ್ತು ಮಾಲ್‌ಗಳ ಬಳಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ, ಕಾಲ ಸಿನೆಮಾ ಪ್ರದರ್ಶನ ಮಾಡಬಾರದು. ಹಾಗೂ ರಜನಿಕಾಂತ್ ಅಭಿಮಾನಿಗಳಲ್ಲಿ ಚಿತ್ರ ವೀಕ್ಷಿಸಬೇಡಿ ಎಂದು ಮನವಿ ಮಾಡಿದರು.
ಮಲ್ಲೇಶ್ವರದ ಮಂತ್ರಿ ಮಾಲ್, ವಿವೇಕನಗರದ ಬಾಲಾಜಿ ಚಿತ್ರ ಮಂದಿರ, ಓರಿಯನ್ ಮಾಲ್, ಗೋಪಾಲನ್ ಮಾಲ್‌ಗಳಲ್ಲಿ ಚಿತ್ರ ಪ್ರದರ್ಶನ ಕಂಡಿಲ್ಲ. ಕೆಲವು ಚಿತ್ರಮಂದಿರಗಳಲ್ಲಿ ಕಾಲ ಚಿತ್ರ ಪ್ರದರ್ಶನ ಇರುವುದಿಲ್ಲ ಎಂಬ ನಾಮಫಕಲಗಳನ್ನು ಹಾಕಿದ್ದು ಕಂಡುಬಂತು.
ಪ್ರತಿಭಟನೆ: ರಜನಿಕಾಂತ್ ಅಭಿನಯದ ಕಾಲ ಚಿತ್ರದ ಬಿಡುಗಡೆ ವಿರೋಧಿಸಿ ಚಿತ್ರ ಮಂದಿರಗಳು ಮತ್ತು ಮಾಲ್‌ಗಳ ಎದುರು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಓರಯಾನ್ ಮಾಲ್ ಎದುರು ಚಿತ್ರದ ವಿರುದ್ಧ ಘೋಷಣೆ ಕೂಗುತ್ತಿದ್ದ ವಾಟಾಳ್ ನಾಗರಾಜ್, ಕರವೇ ಪ್ರವೀಣ್ ಶೆಟ್ಟಿ ಸೇರಿ 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಅವರು, ಯಾವುದೆ ಕಾರಣಕ್ಕೂ ಕಾಲ ಸಿನೆಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ನಾವು ಜೈಲಿಗೆ ಹೋದರು ಸರಿಯೆಂದು ಎಚ್ಚರಿಕೆ ನೀಡಿದರು.
ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಮಾತನಾಡಿ, ಕರ್ನಾಟಕದ ಪೊಲೀಸರು ಇರುವುದು ಕನ್ನಡಿಗರ ರಕ್ಷಣೆಗಾಗಿಯೆ ಹೊರತು, ರಜನಿಕಾಂತ್ ಚಿತ್ರದ ರಕ್ಷಣೆಗೆ ಅಲ್ಲ. ನಾಡು, ನುಡಿಗೆ ಅಪಚಾರ ಎಸಗುವ ಯಾರೆ ಆದರೂ ಅವರ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ಕಾಲ ಸಿನೆಮಾದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ತಿಳಿಸಿದರು.







