ರಾಜ್ಯದಲ್ಲಿ ಬಂಡವಾಳ ಹೂಡಲು ಫ್ರಾನ್ಸ್ ನಿಯೋಗಕ್ಕೆ ಸಿಎಂ ಕುಮಾರಸ್ವಾಮಿ ಆಹ್ವಾನ

ಬೆಂಗಳೂರು, ಜೂ. 7: ರಾಜ್ಯದಲ್ಲಿ ಬಂಡವಾಳ ಹೂಡುವ ಬಗ್ಗೆ ಫ್ರಾನ್ಸ್ ದೇಶದ ರಾಯಭಾರಿ ಎಚ್.ಇ.ಅಲೆಕ್ಸಾಂಡ್ರೆ ಝೈಗ್ಲರ್ ಮತ್ತು ಕಾನ್ಸುಲ್ ಜನರಲ್ ಆಫ್ ಫ್ರಾನ್ಸ್ ಫ್ರಾನ್ಸಿಕೋಯ್ಸ್ ಗಾಟಿಯರ್ ಅವರುಗಳೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚರ್ಚಿಸಿದರು.
ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತಮ್ಮನ್ನು ಭೇಟಿಯಾದ ಫ್ರಾನ್ಸ್ ನಿಯೋಗದ ಜೊತೆ ಮಾತನಾಡಿದ ಅವರು, ಈಗಾಗಲೇ ಫ್ರಾನ್ಸ್ ನೊಂದಿಗೆ ಬೆಂಗಳೂರು ಮಹಾ ನಗರ ಪಾಲಿಕೆ, ಕಸ ವಿಲೇವಾರಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿ ಕೊಂಡಿದೆ. ಇದೀಗ ಬೆಂಗಳೂರನ್ನು ಕಸ ಮುಕ್ತವಾಗಿಸಲು ಆದ್ಯತೆಯ ಮೇಲೆ ಕಾರ್ಯನಿರ್ವಹಿಸ ಬೇಕಾಗಿದೆ ಎಂದರು.
ಬೆಂಗಳೂರಿನಲ್ಲಿ ಏರೋನಾಟಿಕಲ್ ಹಾಗೂ ಕೈಗಾರಿಕೆ ಸಂಬಂದಿಸಿದಂತೆ ಹೆಚ್ಚು ಅವಕಾಶಗಳಿವೆ. ಬಂಡವಾಳ ಹೂಡಿಕೆದಾರರು ಬಂದರೆ ಅವರಿಗೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ಹಾಗೂ ಅಗತ್ಯ ಬೆಂಬಲ ನೀಡಲಿದೆ ಎಂದು ಕುಮಾರಸ್ವಾಮಿ ಇದೇ ವೇಳೆ ಭರವಸೆ ನೀಡಿದರು.
ಬೆಂಗಳೂರು ನಗರದ ಹವಾಮಾನ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಗಿದೆ. ಬೆಂಗಳೂರಿನ ಐಐಎಸ್‌ಸಿ ಸಂಸ್ಥೆಗೆ ಭೇಟಿ ನೀಡಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಜ್ಞಾನಾಧಾರಿತವಾದ ಸಂಸ್ಥೆಗಳ ಸ್ಥಾಪನೆಗೆ ಅನುಕೂಲಕಾರಿಯಾಗಿದೆ. ಈ ಕುರಿತು ನಮ್ಮ ದೇಶದ ಸಂಬಂಧಿಸಿದವರ ಜೊತೆ ಚರ್ಚಿಸುತ್ತೇವೆ ಎಂದು ಫ್ರಾನ್ಸ್ ರಾಯಭಾರಿಗಳು ತಿಳಿಸಿದರು.







