ಶಿಕ್ಷಕ-ಪದವೀಧರ ಕ್ಷೇತ್ರಗಳಿಗೆ ಜೂ.8 ರಂದು ಬೆಳಗ್ಗೆ 7ಗಂಟೆಯಿಂದ ಮತದಾನ

ಬೆಂಗಳೂರು, ಜೂ. 7: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಹಾಗೂ ವಿಪಕ್ಷ ಬಿಜೆಪಿಯ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ರಾಜ್ಯದ ಮೂರು ಶಿಕ್ಷಕರ ಮತ್ತು ಮೂರು ಪದವೀಧರರ ಕ್ಷೇತ್ರಗಳಿಗೆ ನಾಳೆ(ಜೂ.8) ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ
ನಾಳೆ ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ. ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಕುತೂಹಲ ಸೃಷ್ಟಿಸಿದೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ರಚಿಸಿದ್ದರೂ, ಉಭಯ ಪಕ್ಷಗಳು ಈ ಕ್ಷೇತ್ರಗಳಲ್ಲಿ ಪರಸ್ಪರ ಎದುರಾಳಿಗಳು. ವಿಪಕ್ಷ ಬಿಜೆಪಿಯೂ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಜೂ.12ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಶಿಕ್ಷಕರ ಕ್ಷೇತ್ರಗಳು: ಆಗ್ನೇಯ ಶಿಕ್ಷಕರ ಕ್ಷೇತ್ರ (ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ), ದಕ್ಷಿಣ ಶಿಕ್ಷಕರ ಕ್ಷೇತ್ರ (ಹಾಸನ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ), ಈಶಾನ್ಯ ಶಿಕ್ಷಕರ ಕ್ಷೇತ್ರ (ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಬೀದರ್ ಹಾಗೂ ಕಲಬುರಗಿ) ಒಳಗೊಂಡಿದೆ.
ಪದವೀಧರ ಕ್ಷೇತ್ರಗಳು: ನೈರುತ್ಯ ಪದವೀಧರ ಕ್ಷೇತ್ರವು(ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಚನ್ನಗಿರಿ), ಬೆಂಗಳೂರು ಪದವೀಧರ ಕ್ಷೇತ್ರ(ಬೆಂ.ನಗರ, ಬೆಂ.ಗ್ರಾಮಾಂತರ ಮತ್ತು ರಾಮನಗರ), ಈಶಾನ್ಯ ಪದವೀಧರ ಕ್ಷೇತ್ರ (ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಬೀದರ್ ಹಾಗೂ ಕಲಬುರಗಿ) ಒಳಗೊಂಡಿದೆ. ಶಿಕ್ಷಕರು ಮತ್ತು ಪದವೀಧರರು ಈ ಚುನಾವಣೆಯಲ್ಲಿ ಮಾತ್ರ ಮತದಾನದ ಹಕ್ಕು ಹೊಂದಿದ್ದು, ನಾಳೆ ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.







