ಗೋವಾದ ಬಿಜೆಪಿ ಸರಕಾರ ಸಂವಿಧಾನವನ್ನು ಅವಮಾನಿಸುತ್ತಿದೆ: ಅಖಿಲ ಭಾರತ ಹಿಂದೂ ಸಮ್ಮೇಳನ ಆರೋಪ

ಪೊಂಡಾ(ಗೋವಾ),ಜೂ.7: ರಾಜ್ಯದ ಬಿಜೆಪಿ ಸರಕಾರವು ಶ್ರೀರಾಮಸೇನೆಯ ನಾಯಕ ಪ್ರಮೋದ್ ಮುತಾಲಿಕ್ ಅವರ ಪ್ರವೇಶವನ್ನು ನಿಷೇಧಿಸುವ ಮೂಲಕ ಸಂವಿಧಾನವನ್ನು ಅವಮಾನಿಸುತ್ತಿದೆ ಎಂದು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಹಿಂದೂ ಸಮ್ಮೇಳನವು ಗುರುವಾರ ಆರೋಪಿಸಿದೆ. ಗೋವಾದ ಆರ್ಚ್ ಬಿಷಪ್ ಫಿಲಿಪೆ ನೆರಿ ಫೆರಾವೊ ಅವರು ಭಾರತೀಯ ಸಂವಿಧಾನವು ಅಪಾಯದಲ್ಲಿದೆ ಎಂದು ಇತ್ತೀಚಿಗಷ್ಟೇ ಹೇಳಿದ್ದರು.
ಭಾರತೀಯ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಚಲನವಲನದ ಹಕ್ಕನ್ನು ಖಾತರಿ ಪಡಿಸಿದೆ.ಗೋವಾದಲ್ಲಿ ಮುತಾಲಿಕ್ ಅವರ ಪ್ರವೇಶವನ್ನು ನಿಷೇಧಿಸುವ ಬಿಜೆಪಿ ನೇತೃತ್ವದ ಸರಕಾರದ ನಿರ್ಧಾರವು ಸಂವಿಧಾನದ ಅಪಮಾನವಾಗಿದೆ ಮತ್ತು ಅಖಿಲ ಭಾರತ ಹಿಂದು ಸಮ್ಮೇಳನವು ಇದನ್ನು ಸರ್ವಾನುಮತದಿಂದ ಖಂಡಿಸುತ್ತದೆ ಎಂದು ಹಿಂದು ಜನಜಾಗೃತಿ ಸಮಿತಿಯ ವಕ್ತಾರ ಚೇತನ ರಾಜಹಂಸ ಅವರು ಇಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದರು.
ಜಿಲ್ಲಾಡಳಿತವು ಗೋವಾದಲ್ಲಿ ಮುತಾಲಿಕ್ ಪ್ರವೇಶವನ್ನು ಪದೇ ಪದೇ ನಿಷೇಧಿಸಿದ್ದು,ಇದನ್ನು ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಸಂವಿಧಾನವು ಅಪಾಯದಲ್ಲಿದೆ ಎಂದು ಹೇಳಿರುವ ಆರ್ಚ್‌ಬಿಷಪ್ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗುವಂತೆ ಕ್ರೈಸ್ತ ಸಮುದಾಯಕ್ಕೆ ಸೂಚಿಸಿದ್ದಾರೆ. ವಾಸ್ತವವೇನೆಂದರೆ ತಮ್ಮ ಚಟುವಟಿಕೆಗಳಿಂದ ಗೋವಾದ ಜನರು ಮತ್ತು ರಾಜ್ಯದ ಸಂಸ್ಕೃತಿಗೆ ನಿಜವಾದ ಅಪಾಯವನ್ನೊಡ್ಡಿರುವ ವಿದೇಶಿ ಪ್ರವಾಸಿಗಳ ವಿರುದ್ಧ ಅವರೆಂದಿಗೂ ಧ್ವನಿಯೆತ್ತುವದಿಲ್ಲ ಎಂದು ರಾಜಹಂಸ ತಿಳಿಸಿದರು.
ವಿವಿಧ ಹಿಂದು ಸಂಘಟನೆಗಳ ನಾಯಕರು ಮತ್ತು ರಾಜಕಾರಣಿಗಳು ವಾರ್ಷಿಕ ಅಖಿಲ ಭಾರತ ಹಿಂದು ಸಮ್ಮೇಳನದಲ್ಲಿ ಭಾಗವಹಿಸಿದ್ದು,ಭಾರತವನ್ನು ‘ಹಿಂದು ರಾಷ್ಟ್ರ’ವನ್ನಾಗಿ ಮಾಡುವ ನಿರ್ಣಯವೊಂದನ್ನು ಅದು ಗುರುವಾರ ಅಂಗೀಕರಿಸಿದೆ.
ಇತ್ತೀಚಿನ ದಿನಗಳಲ್ಲಿ ಏಕ ಸಂಸ್ಕೃತಿ ವಾದದಂತಹ ಹೊಸ ಪ್ರವೃತ್ತಿಯೊಂದು ದೇಶದಲ್ಲಿ ತಲೆಯೆತ್ತುತ್ತಿದ್ದು,ನಮ್ಮ ಆಹಾರ,ದಿರಿಸು,ಬದುಕು ಮತ್ತು ನಮ್ಮ ಆರಾಧನೆಯಲ್ಲಿಯೂ ಏಕರೂಪತೆಯನ್ನು ಅದು ಆಗ್ರಹಿಸುತ್ತಿದೆ. ಮಾನವ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದ್ದು, ಪ್ರಜಾಪ್ರಭುತ್ವವು ವಿನಾಶದ ಹಾದಿಯಲ್ಲಿರುವಂತಿದೆ. ವಿವಿಧ ಅಲ್ಪಸಂಖ್ಯಾತ ವರ್ಗಗಳು ತಮ್ಮ ಸುರಕ್ಷೆಯ ಬಗ್ಗೆ ಆತಂಕಗೊಂಡಿವೆ. ದೇಶದಲ್ಲಿ ಕಾನೂನಿಗೆ ಗೌರವ ಕುಸಿಯುತ್ತಿದೆ ಎಂದು ಆರ್ಚ್‌ಬಿಷಪ್ ಕ್ರೈಸ್ತ ಸಮುದಾಯಕ್ಕೆ ಬರೆದ ಪತ್ರದಲ್ಲಿ ಹೇಳಿದ್ದರು. ರಾಜ್ಯದ 15 ಲಕ್ಷ ಜನಸಂಖ್ಯೆಯಲ್ಲಿ ಕ್ರೈಸ್ತರ ಸಂಖ್ಯೆ ಶೇ.25ಕ್ಕೂ ಅಧಿಕವಿದೆ.







