ಎಂ.ಬಿ.ಪಾಟೀಲ್‌ಗೆ ತಪ್ಪಿದ ಸಚಿವ ಸ್ಥಾನ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಸಾಮೂಹಿಕ ರಾಜೀನಾಮೆ

ಬೆಂಗಳೂರು, ಜೂ.7: ಉತ್ತರ ಕರ್ನಾಟಕ ಪ್ರಭಾವಿ ನಾಯಕ ಹಾಗೂ ಶಾಸಕ ಎಂ.ಬಿ.ಪಾಟೀಲ್‌ಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿದ್ದನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡರು ತಮ್ಮ ಪದಾಧಿಕಾರಿ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ್, ಹಿಂದಿನ ಸರಕಾರದ ಅವಧಿಯಲ್ಲಿ ಸಚಿವರಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿರುವ ದಕ್ಷ ಆಡಳಿತಗಾರರನ್ನು ಸಂಪುಟದಿಂದ ದೂರವಿಟ್ಟಿರುವುದು ನಮಗೆಲ್ಲ ನೋವುಂಟು ಮಾಡಿದೆ. ಆದುದರಿಂದಾಗಿ ನಾವು ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಸಮಿತಿ, ತಾಲೂಕು ಸಮಿತಿ, ಬ್ಲಾಕ್ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ವಿವಿಧ ಗ್ರಾಮ ಪಂಚಾಯತ್ ಗಳಿಗೆ ಸೇರಿದ 50 ಕ್ಕೂ ಅಧಿಕ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಐದು ವರ್ಷದ ಆಡಳಿತ ಅವಧಿಯಲ್ಲಿ ರಾಜ್ಯದಲ್ಲಿ ಅಪಾರವಾದ ನೀರಾವರಿ ಯೋಜನೆಗಳನ್ನು ದೇಶ-ವಿದೇಶಗಳಲ್ಲಿ ಅಧ್ಯಯನ ನಡೆಸಿ, ಹಲವಾರು ತಂತ್ರಜ್ಞಾನಗಳ ಮೂಲಕ ಜಾರಿ ಮಾಡಿದ್ದಾರೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ನೂರಾರು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದಾರೆ. ಹೀಗಿದ್ದರೂ, ನೂತನ ಸಚಿವ ಸಂಪುಟದಲ್ಲಿ ಎಂ.ಬಿ.ಪಾಟೀಲ್‌ರಿಗೆ ಅವಕಾಶ ನೀಡದೇ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಂ.ಬಿ.ಪಾಟೀಲ್ ತಮ್ಮ ಮತ ಕ್ಷೇತ್ರದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರ, ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಅಂದು ಮುಂದಿನ ನಡೆ ಏನು ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ. ಅದರೊಳಗೆ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಹಾಗೂ ಸಚಿವ ಸ್ಥಾನ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಮಾತನಾಡಿ, ಉತ್ತರ ಕರ್ನಾಟಕದ ಪ್ರಬಲ ನಾಯಕರನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಅದರಲ್ಲಿಯೂ ಪಕ್ಷದ ಉಳಿವಿಗಾಗಿ ಹಾಗೂ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಎಂ.ಬಿ.ಪಾಟೀಲ್‌ಗೆ ಸಚಿವ ಸ್ಥಾನ ನೀಡಬೇಕು ಎಂದರು.







