ಸರಕಾರದಲ್ಲಿಯ ಕೆಲವರಿಂದ ಬೆದರಿಕೆ: ಪತ್ರಕರ್ತೆ ಬರ್ಖಾ ದತ್ ಆರೋಪ

ಹೊಸದಿಲ್ಲಿ, ಜೂ.7: ತಾನು ಟಿವಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ಬಯಸಿರುವ ಸರಕಾರದಲ್ಲಿಯ ಕೆಲವರಿಂದ ತನಗೆ ಬೆದರಿಕೆಗಳು ಬರುತ್ತಿವೆ ಎಂದು ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರು ಗುರುವಾರ ಸರಣಿ ಟ್ವೀಟ್‌ಗಳಲ್ಲಿ ಆರೋಪಿಸಿದ್ದಾರೆ.
ಅಧಿಕಾರಾರೂಢ ಬಿಜೆಪಿಯು ತನಗೆ ಆನ್‌ಲೈನ್ ಮತ್ತು ಆಫ್‌ಲೈನ್ ಕಿರುಕುಳವನ್ನು ನೀಡುವ ಸಂಚನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ಎನ್‌ಡಿಟಿವಿಯ ಪತ್ರಕರ್ತ ರವೀಶ್ ಕುಮಾರ್ ಮತ್ತು ಸ್ವತಂತ್ರ ಪತ್ರಕರ್ತೆ ರಾಣಾ ಅಯ್ಯೂಬ್ ಅವರು ಇತ್ತೀಚಿಗೆ ಆರೋಪಿಸಿದ್ದರು.
ಹೊಸ ಟಿವಿ ಯೋಜನೆಗಳ ಗೋಜಿಗೆ ಹೋಗದಂತೆ ಆಡಳಿತ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಕೆಲವರು ಕಳೆದ ಕೆಲವು ತಿಂಗಳುಗಳಿಂದ ತನಗೆ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಆ ಯೋಜನೆಗಳು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ತನಗೆ ತಿಳಿಸಿದ್ದಾರೆ. ತನ್ನನ್ನು ತಡೆಯುವದು,ತನಗೆ ಕಳಂಕವನ್ನು ಅಂಟಿಸುವುದು ಮತ್ತು ತನ್ನ ದೂರವಾಣಿಗಳನು ಕದ್ದಾಲಿಸುವುದು ಹೇಗೆ ಎನ್ನುವುದನ್ನು ಚರ್ಚಿಸಲು 45 ನಿಮಿಷಗಳ ಸಭೆಯೂ ನಡೆದಿದೆ ಎಂದು ತನಗಿಂದು ತಿಳಿಸಲಾಗಿದೆ ಎಂದು ದತ್ ಟ್ವೀಟಿಸಿದ್ದಾರೆ. ಅವರು ತನ್ನದೇ ಆದ ಸುದ್ದಿವಾಹಿನಿಯನ್ನು ಆರಂಭಿಸಲು ಯೋಜಿಸುತ್ತಿದ್ದಾರೆ.
ತನ್ನ ಟ್ವೀಟ್‌ಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್ ರಾಠೋಡ್ ಅವರಿಗೂ ಟ್ಯಾಗ್ ಮಾಡಿರುವ ದತ್, ತನಗೆ ಬಂದಿರುವ ಬೆದರಿಕೆಗಳನ್ನು ಗಮನಿಸುವಂತೆ ಕೇಳಿಕೊಂಡಿದ್ದಾರೆ. ಸರಕಾರವು ತನ್ನ ಫೋನ್‌ಗಳನ್ನು ಕದ್ದಾಲಿಸಿದರೆ ಮತ್ತು ತನ್ನ ಮನೆಯಲ್ಲಿ ಕದ್ದಾಲಿಕೆಯ ಗುಪ್ತ ಸಾಧನಗಳನ್ನು ಅಳವಡಿಸಿದರೆ ಅದು ತನ್ನ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.







