ಶುಶ್ರೂಷೆ ಜೊತೆ ಸೂಕ್ತ ಮಾರ್ಗದರ್ಶನ ಆರೋಗ್ಯ ಇಲಾಖೆ ಹೊಣೆ: ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ, ಜೂ.7: ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಮತ್ತು ತುರ್ತು ಸಂದರ್ಭದಲ್ಲಿ ಯಾವ ಆಸ್ಪತ್ರೆಗಳಿಗೆ ತಲುಪಿಸಬೇಕೆಂಬ ಮಾಹಿತಿಯನ್ನೊಳಗೊಂಡ ಸುತ್ತೋಲೆ ಎಲ್ಲ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಡಾಕ್ಟರ್‌ಗಳಲ್ಲಿ ಲಭ್ಯವಿರಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಗುರುವಾರ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆ, ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಾ ಪ್ರಾಧಿಕಾರ ಸಭೆ, ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ, ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯನ್ನೊಳಗೊಂಡಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಮರಣದ ಸಂಖ್ಯೆಯನ್ನು ಶೂನ್ಯಕ್ಕಿಳಿಸಲು ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಶುಶ್ರೂಷೆ ನೀಡಲು ಆರೋಗ್ಯ ಇಲಾಖೆಯಲ್ಲಿರುವ ಸೌಲ್ಯಗಳ ಬಗ್ಗೆ ಇಲಾಖೆಯ ಡಾಕ್ಟರ್‌ಗಳ ಬಳಿ ಸಮಗ್ರ ಮಾಹಿತಿ ಇರಬೇಕು. ಹಾಗಿದ್ದರೆ ಮಾತ್ರ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಶಾಲಾ ಮಕ್ಕಳಿಗೆ ಶಾಲೆ ಆರಂಭವಾಗಿದ್ದು ಲಸಿಕಾ ಕಾರ್ಯಕ್ರಮ ನಿಗದಿತ ಗುರಿ ಸಾಧಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಹೇಳಿದರು. ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಾ ಪ್ರಾಧಿಕಾರದ ಕಾನೂನಿನಲ್ಲಿ ತಿದ್ದುಪಡಿಯಾಗಿದ್ದು ಗಜೆಟ್ ನೋಟಿಫಿಕೇಶನ್ ಆಗಿದೆ ಎಂದು ಡಾ.ರಾಮರಾವ್ ಮಾಹಿತಿ ನೀಡಿದರು.
ಜಿಲ್ಲೆ ಕ್ಷಯರೋಗ ಪತ್ತೆ ಹಚ್ಚುವಲ್ಲಿ ಮುಂಚೂಣಿಯಲ್ಲಿದ್ದು ಅವರಿಗೆ ಸೂಕ್ತ ಶುಶ್ರೂಷೆ ನೀಡಲಾಗುತ್ತಿದೆ ಎಂದು ಡಾ. ಚಿದಾನಂದ ಸಂಜು ಸಭೆಗೆ ಮಾಹಿತಿ ನೀಡಿದರು. ತಂಬಾಕು ಸೇವನೆಯಿಂದಾಗುವ ಬಾಯಿ, ಚರ್ಮದ ಕ್ಯಾನ್ಸರ್‌ನ್ನು ಪತ್ತೆ ಹಚ್ಚುವಲ್ಲಿ ಆರೋಗ್ಯ ಇಲಾಖೆಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಯೆನಪೋಯ ಮೆಡಿಕಲ್ ಕಾಲೇಜಿನಿಂದ ತರಬೇತಿ ನೀಡಲಾಗಿದ್ದು ಈ ಸಂಬಂಧ ಮುಂದಿನ ಕ್ರಿಯಾ ಯೋಜನೆ ಮತ್ತು ಪತ್ತೆ ಮಾಡಿದ ಪ್ರಕರಣಗಳ ಸವಿವರ ಮಾಹಿತಿಯನ್ನು ನೀಡಿ ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ವೈದ್ಯರಿಗೆ ಸೂಚನೆ ನೀಡಿದರು.
ಎಂಡೋಸಲ್ಫಾನ್ ಪೀಡಿತರಿಗೆ ದೊರಕಬೇಕಾದ ಸೌಲ್ಯಗಳ ಬಗ್ಗೆ, ನೂತನ ಪ್ರಕರಣ ಪತ್ತೆಯಾಗಿ ಅವರಿಗೆ ಪಿಂಚಣಿ ವ್ಯವಸ್ಥೆಯಾಗಿರುವ ಬಗ್ಗೆಯೂ ಚರ್ಚಿಸಲಾಯಿತು. ಹೊಸದಾಗಿ ನಾಲ್ಕು ಜನರಿಗೆ ಪಿಂಚಣಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್‌ಒ ಹೇಳಿದರು.
ವಿಕಲಚೇತನರಿಗಾಗಿ ನೀಡಿರುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾ ಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಟ್ಟು 33 ಗಾಲಿ ಕುರ್ಚಿ ನೀಡಲಾಗಿದೆ. 13 ಫಲಾನುವಿಗಳಿಗೆ ಇಲಾಖೆಯಿಂದ ಅಗತ್ಯ ನೆರವು ನೀಡಲಾಗಿದೆ ಎಂದು ಡಾ.ರೋಹಿಣಿ ತಿಳಿಸಿದರು.
ನಿಪಾಹ್‌ದಿಂದ ಉಡುಪಿ ಜಿಲ್ಲೆಯ ಜನರಿಗೆ ಯಾವುದೇ ಆತಂಕವಾಗಿಲ್ಲ. ಸಾಂಕ್ರಾಮಿಕ ರೋಗಗಳು ಹತೋಟಿಯಲ್ಲಿವೆ ಎಂದು ಡಿಎಚ್‌ಒ ಹೇಳಿದರು. ಸಾಂಕ್ರಾಮಿಕ ರೋಗಕ್ಕೂ ಸ್ವಚ್ಛತೆಗೂ ಅವಿನಾಭಾವ ಸಂಬಂಧವಿದ್ದು, ರೋಗ ಲಕ್ಷಣಗಳು ಪತ್ತೆಯಾದಲ್ಲಿ ತಕ್ಷಣವೇ ತನಗೆ ವರದಿ ನೀಡಿ. ಈ ಸಂಬಂಧ ಗ್ರಾಪಂಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾದ ಅಗತ್ಯ ವಿದೆ ಎಂದು ಪ್ರಿಯಾಂಕ, ಸೂಚಿಸಿದರು.
ಜಿಲ್ಲೆಯಲ್ಲಿ ನಾಯಿ ಕಡಿತ, ಹಾವು ಕಡಿತಕ್ಕೆ ಸಂಬಂಧಿಸಿದ ಔಷಧಿಗಳನ್ನು ಕಾಯ್ದಿಡಿ ಎಂದ ಜಿಲ್ಲಾಧಿಕಾರಿ, ಜಿಲ್ಲೆಯ ಮೂರು ಬ್ಲಡ್ ಬ್ಯಾಂಕ್‌ಗಳಿಂದ 7001ಯುನಿಟ್ ರಕ್ತ ಸಂಗ್ರಹಿಸಲಾಗಿದೆ. 61 ಕ್ಯಾಂಪ್‌ಗಳನ್ನು ಮಾಡಲಾಗಿದೆ ಎಂದರು. ಎಚ್‌ಐವಿ ಶುಶ್ರೂಷೆಗೆ ಸಂಬಂಧಿಸಿದಂತೆ ಹಾಗೂ ಎಆರ್‌ಟಿ ಕೇಂದ್ರಗಳ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಎನ್‌ಜಿಒಗಳು ನೀಡಿದ ಮಾಹಿತಿಯನ್ನು ಪಡೆದುಕೊಂಡರು. ಎಚ್‌ಐವಿ ಪೀಡಿತರಿಗೆ ಇನ್ನಷ್ಟು ಉತ್ತಮ ಆರೋಗ್ಯ ಸೇವೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಡಿಎಚ್‌ಒಗೆ ಸೂಚಿಸಿದರು.
ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಸರ್ಜನ್‌ಮಧುಸೂದನ್ ನಾಯಕ್, ಸಹಾಯಕ ಔಷಧ ನಿಯಂತ್ರಣಾಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.







