ಉಡುಪಿ ತಾಪಂಗೆ ಪಂಚಾಯತ್ ಸಶಕ್ತೀಕರಣ ರಾಷ್ಟ್ರೀಯ ಪ್ರಶಸ್ತಿ

ಉಡುಪಿ, ಜೂ.7:ಉಡುಪಿ ತಾಲೂಕು ಪಂಚಾಯತ್ 2016-17ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದ ಎಲ್ಲಾ ಯೋಜನೆಗಳಲ್ಲಿನ ಸಮಗ್ರ ಪ್ರಗತಿಯನ್ನು ಆಧರಿಸಿ ‘ದೀನ್‌ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ವಿಶೇಷ ಹಿರಿಮೆಗೆ ಪಾತ್ರವಾಗಿದೆ.
ಇತ್ತೀಚೆಗೆ ಪಂಜಾಬ್‌ನ ಜಬಲ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ತಾಪಂ ಹಂತದಲ್ಲಿ ಸಭೆಗಳ ನಿರ್ವಹಣೆ ಮತ್ತು ದಾಖಲೀಕರಣ, ಅಧಿಕಾರಿಗಳ ಪಾಲ್ಗೊಳ್ಳುವಿಕೆ ಮತ್ತು ಜನಪ್ರತಿನಿಧಿಗಳೊಂದಿಗಿನ ಸಮನ್ವಯ, ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿ ದಂತೆ ಮೂರು ಹಂತದ ಪ್ರಕ್ರಿಯೆಗಳಲ್ಲಿ ಮೌಲ್ಯಮಾಪನ ಜರುಗಿದ್ದು ಈ ಪೈಕಿ ಉಡುಪಿ ತಾಪಂ ರಾಜ್ಯ ಹಂತದಲ್ಲಿ ಅಗ್ರಗಣ್ಯ ಸ್ಥಾನ ಪಡೆದು ಪ್ರಶಸ್ತಿಗೆ ಪಾತ್ರವಾಗಿದೆ.
ಆನ್‌ಲೈನ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಕೆ ಬಳಿಕ ಗ್ರಾಮೀಣಾಭಿವೃಧ್ಧಿ ಇಲಾಖೆ ನಿರ್ದೇಶಕ ಕೆಂಪೇಗೌಡ ನೇತೃತ್ವದ ತಂಡ ಪರಿಶೀಲಿಸಿ, ವರದಿ ಸಲ್ಲಿಸಿತ್ತು. ಆ ಬಳಿಕ ಕೇಂದ್ರ ಸರ್ಕಾರದಿಂದ ನಿಯೋಜಿತವಾಗಿದ್ದ ಕೇರಳದ ಸಂಪನ್ಮೂಲ ವ್ಯಕ್ತಿಗಳ ತಂಡವು ಸಮಗ್ರವಾಗಿ ವೌಲ್ಯಮಾಪನ ನಿರ್ವಹಿಸುವ ಮೂಲಕ ಉಡುಪಿ ತಾಪಂನ್ನು ಆಯ್ಕೆ ಮಾಡಿದ್ದು ಪುರಸ್ಕಾರದ ಹಿರಿಮೆಗೆ ಪಾತ್ರವಾಗಿದೆ.
ಸ್ವಚ್ಛತಾ ಚಟುವಟಿಕೆಗಳ ಅನುಷ್ಠಾನ, ಇಲಾಖಾ ಮೇಲ್ವಿಚಾರಣೆ, ಲೆಕ್ಕಪತ್ರ ನಿರ್ವಹಣೆ, ತಂಡಕಾರ್ಯ ನಿರ್ವಹಣೆ, ಸದಸ್ಯರ ಹಾಜರಾತಿ ಹಾಗೂ ಕ್ರಿಯಾಶೀಲ ಪಾಲ್ಗೊಳ್ಳುವಿಕೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ ಗಳನ್ನು ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಿರುವ ವಿಧಾನಗಳನ್ನು ಪರಿಶೀಲಿಸುವುದನ್ನು ಆಯ್ಕೆ ಪ್ರಕ್ರಿಯೆ ಒಳಗೊಂಡಿತ್ತು. ಈ ಎಲ್ಲಾ ಚಟುವಟಿಕೆಗಳಲ್ಲಿ ರಾಜ್ಯ ಹಂತದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಉಡುಪಿ ತಾಪಂ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಪಂ ಪ್ರಶಸ್ತಿಗೆ ಅರ್ಹತೆಯನ್ನು ಗಳಿಸಿದ್ದವು. ಉಡುಪಿ ತಾಪಂಗೆ ಪುರಸ್ಕಾರದೊಂದಿಗೆ 25ಲಕ್ಷ ರೂ.ಗಳ ವಿಶೇಷ ಅನುದಾನವೂ ದೊರೆತಿದೆ.
ಉಡುಪಿ ತಾಪಂ ಪುರಸ್ಕಾರಕ್ಕೆ ಪಾತ್ರವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಇನ್ನಷ್ಟು ಸಂಘಟಿತ ಕಾರ್ಯಗಳಿಗೆ ಇದು ಪೆ್ರೀರಣೆಯಾಗಲಿ ಎಂದು ಅಭಿನಂದಿಸಿದ್ದಾರೆ.
ಈ ಸಂದರ್ದಲ್ಲಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಉಡುಪಿ ತಾಪಂನ ಸಾಧನೆ ಹೆಮ್ಮೆ ತಂದಿದೆ. ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದರೆ ಮಾದರಿಯಾಗಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದರು.







