ಎನ್.ಮಹೇಶ್‍ಗೆ ಸಚಿವ ಸ್ಥಾನ ದೊರಕಿರುವುದು ಜಿಲ್ಲೆಯ ಅಭಿವೃದ್ದಿಗೆ ಪೂರಕ: ಬಿಎಸ್ಪಿ ಮುಖಂಡ ಎಮ್ ಪಂಚಾಕ್ಷರಿ

ಹನೂರು,ಜೂ.07: ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬಿಎಸ್‍ಪಿ ರಾಜ್ಯಾದ್ಯಕ್ಷ ಎನ್ ಮಹೇಶ್‍ರವರಿಗೆ ಸಚಿವ ಸ್ಥಾನ ದೊರಕಿರುವುದು ಹಿಂದುಳಿದ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಲಿದೆ. ಇವರು ಸಚಿವರಾಗುವ ಮೂಲಕ ದೇಶದಲ್ಲಿ ಒಂದು ಇತಿಹಾಸ ಸೃಷ್ಟಿಸಿದ್ದಾರೆ ಎಂದು ಬಿಎಸ್ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಎಮ್ ಪಂಚಾಕ್ಷರಿ ಹರ್ಷ ಹೇಳಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಇದೇ ಪ್ರಥಮ ಭಾರಿಗೆ ಆಯ್ಕೆಯಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿರವರ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಗಿರಿಯನ್ನು ಗಿಟ್ಟಿಸಿಕೊಂಡಿರುವ ಎನ್ ಮಹೇಶ್‍ರವರಿಗೆ ಅಭಿನಂದನೆ ಸಲ್ಲಿಸಿ ನಂತರ ಮಾತನಾಡಿದ ಅವರು, ಉತ್ತರಪ್ರದೇಶದ ನಂತರ ಬಹುಜನ ಸಮಾಜವಾದಿ ಪಾರ್ಟಿಯ ಶಾಸಕನಿಗೆ ಸಂಪುಟ ದರ್ಜೆಯಲ್ಲಿ ಸಚಿವ ಸ್ಥಾನ ದೊರಕಿರುವುದು ಕರ್ನಾಟಕದಲ್ಲಿ ಮಾತ್ರ ಎಂದರು.
ಎನ್ ಮಹೇಶ್ ರಾಜಕೀಯದಲ್ಲಿ ಮಹತ್ತರವಾದ ಅನುಭವ ಹೊಂದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇವರ ಆಡಳಿತ, ಹೋರಾಟ ಮತ್ತು ಅನುಭವದ ಫಲವಾಗಿ ನಮ್ಮ ಜಿಲ್ಲೆ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತದೆ ಎಂದು ಮತದಾರರು ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಮಂತ್ರಿ ಗಿರಿ ಒಲಿದಿದ್ದರಿಂದ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಸಂತಸ ಪಟ್ಟರು.





