ದಾವಣಗೆರೆ: ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಧರಣಿ

ದಾವಣಗೆರೆ,ಜೂ.07: ಶಾಸಕ, ಹಿರಿಯ ರಾಜಕಾರಣಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ದಾವಣಗೆರೆಯಲ್ಲಿ ಅಖಿಲಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಸರ್ಕಾರದ ಧೋರಣೆ ಖಂಡಿಸಿ, ಎಸ್‍ಎಸ್‍ಗೆ ಸಚಿವ ಸ್ಥಾನ ನೀಡಿದಿದ್ದರೆ ದಾವಣಗೆರೆ ಬಂದ್ ಸಹ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ಮೈತ್ರಿ ಸರ್ಕಾರದ ಪ್ರಥಮ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪಗೆ ಅವಕಾಶ ನೀಡದೆ ವಂಚಿಸಲಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವವಿದೆ ಎಂದರೆ ಅದು ಶಾಮನೂರು ಶಿವಶಂಕರಪ್ಪ ಅವರಿಂದ ಮಾತ್ರ. ಹಿರಿಯರಾದ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ದಾವಣಗೆರೆ ಜಿಲ್ಲಾ ಬಂದ್‍ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆ ಕಾಂಗ್ರೆಸ್‍ನ ಭದ್ರಕೋಟೆಯಾಗಿದೆ. ಶಿವಶಂಕರಪ್ಪ ಅವರು ಹಿರಿಯರು. ಸಚಿವರ ಮೊದಲ ಪಟ್ಟಿಯಲ್ಲೇ ಅವರ ಹೆಸರಿರಬೇಕಿತ್ತು. ಆದರೆ, ಅವರನ್ನು ಕಡೆಗಣಿಸಿರುವುದು ವೀರಶೈವ ಮಹಾಸಭಾ ಹಾಗೂ ಜಿಲ್ಲೆಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಕೆ.ಬಿ. ನಾಗರಾಜ್ ಮಾತನಾಡಿ, ಎಸ್.ಎಸ್. ಅವರಿಗೆ ಸಚಿವ ಸ್ಥಾನ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಪಾಲಿಕೆ ಸದಸ್ಯರಾದ ಜಿ.ಬಿ ಲಿಂಗರಾಜ್, ಸುರೇಂದ್ರ ಮೋಯಿಲಿ, ಪೂಜಾರ್ ಬಸವರಾಜ್, ಶ್ರೀನಿವಾಸ್, ತಿಪ್ಪಣ್ಣಜ್ಕೇರಂ ಗಣೇಶ್, ರೇವಣಸಿದ್ದಪ್ಪ, ಡೋಲಿ ಚಂದ್ರು, ದೊಗ್ಗಳ್ಳಿ ಬಸವರಾಜ್, ಎಂ.ಜಿ. ಗೋಪಾಲ್, ಆರ್. ರಾಜು ಇದ್ದರು.







