ಆದಿತ್ಯನಾಥ್ ಮುಖ್ಯ ಕಾರ್ಯದರ್ಶಿ ವಿರುದ್ಧ 25ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪ

ಆದಿತ್ಯನಾಥ್
ಲಕ್ನೊ, ಜೂ.7: ಉತ್ತರಪ್ರದೇಶದ ರಾಜ್ಯಪಾಲರು ಮುಖ್ಯಮಂತ್ರಿ ಆದಿತ್ಯನಾಥ್ಗೆ ಬರೆದಿರುವ ಪತ್ರದಲ್ಲಿ, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಗೋಯಲ್ 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವ ದೂರಿನ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಲಕ್ನೊದ ಇಂದಿರಾನಗರ ನಿವಾಸಿ ಅಭಿಷೇಕ್ ಗುಪ್ತಾ ಎಂಬವರು ಸಂದಿಲಾ ತಾಲೂಕಿನ ರೆಸ್ಸೊ ಗ್ರಾಮದಲ್ಲಿ ಎಸ್ಸಾರ್ ಆಯಿಲ್ ಸಂಸ್ಥೆಯ ಪೆಟ್ರೋಲ್ ಪಂಪ್ ಸ್ಥಾಪಿಸಲು ಉದ್ದೇಶಿಸಿದ್ದು, ಇದಕ್ಕೆ ಅಗತ್ಯವಿರುವ ಹೆಚ್ಚುವರಿ ಜಮೀನು ಒದಗಿಸಬೇಕೆಂದು ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಗೋಯಲ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಮೀನು ಒದಗಿಸಬೇಕಿದ್ದರೆ 25 ಲಕ್ಷ ರೂ. ನೀಡಬೇಕೆಂದು ಗೋಯಲ್ ಸೂಚಿಸಿದ್ದರು ಎನ್ನಲಾಗಿದೆ. ಹಣ ನೀಡದೆ ಅನುಮತಿ ನೀಡುವುದಿಲ್ಲ ಎಂದು ಗೋಯಲ್ ಪಟ್ಟು ಹಿಡಿದಿದ್ದಾರೆ ಎಂದು ದೂರಿ ಗುಪ್ತ 2018ರ ಎಪ್ರಿಲ್ 18ರಂದು ತನಗೆ ದೂರು ನೀಡಿರುವುದಾಗಿ ರಾಜ್ಯಪಾಲ ರಾಮ ನಾಕ್ ತಿಳಿಸಿದ್ದು, ಈ ಪತ್ರವನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಗಮನಕ್ಕೆ ತಂದಿದ್ದಾರೆ.
ಆದರೆ ಆರೋಪವನ್ನು ನಿರಾಕರಿಸಿರುವ ಗೋಯಲ್, ಇದು ಹಾಸ್ಯಾಸ್ಪದವಾಗಿದೆ. ರಾಜ್ಯಪಾಲರ ಪತ್ರ ಕೈಸೇರಿದ ಬಳಿಕವಷ್ಟೇ ಗುಪ್ತಾರ ಅರ್ಜಿ ನನ್ನ ಕೈಸೇರಿದೆ. ಈ ಪ್ರಕರಣವನ್ನು ನಾನು ನಿರ್ವಹಿಸುವುದಿಲ್ಲ ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.





