ಮಂಡ್ಯ: ಬೈಕ್‍ಗೆ ಶಾಲಾ ವಾಹನ ಢಿಕ್ಕಿ; ದಸಂಸ ಮುಖಂಡ ಸಣಬ ಶಿವಣ್ಣ ಮೃತ್ಯು

ಮಂಡ್ಯ, ಜೂ.7: ಬೈಕ್‍ಗೆ ಶಾಲಾ ಬಸ್ ಢಿಕ್ಕಿಯಾಗಿ ದಸಂಸ ಹಾಗೂ ಜೆಡಿಎಸ್ ಮುಖಂಡ ಸಣಬ ಶಿವಣ್ಣ(40) ಮೃತಪಟ್ಟ ಘಟನೆ ಪಾಂಡವಪುರ ತಾಲೂಕಿನ ಕಾಮನಾಯಕನಹಳ್ಳಿ ತಿರುವಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮೇಲುಕೋಟೆ ಕಡೆಯಿಂದ ಚಿನಕುರಳಿ ಕಡೆಗೆ ಮಕ್ಕಳನ್ನು ತುಂಬಿಕೊಂಡು ಬರುತ್ತಿದ್ದ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಸೇರಿದ ಎಸ್‍ಟಿಜಿ ಶಾಲಾ ವಾಹನವು ಚಾಲಕನ ನಿಯಂತ್ರಣ ತಪ್ಪಿ ಸಣಬ ಶಿವಣ್ಣ ಅವರ ಬೈಕ್‍ಗೆ ಢಿಕ್ಕಿಯಾಗಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಶಿವಣ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಶಿವಣ್ಣ, ದಸಂಸ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಜತೆಗೆ ಜೆಡಿಎಸ್ ಪಕ್ಷದಲ್ಲೂ ಉತ್ತಮ ಸಂಘಟಕರಾಗಿ ಕೆಲಸ ಮಾಡುತ್ತಿದ್ದ ಶಿವಣ್ಣ ಸಚಿವ ಸಿ.ಎಸ್.ಪುಟ್ಟರಾಜು ಅವರ ಕಟ್ಟಾ ಬೆಂಬಲಿಗರಾಗಿದ್ದರು. ಶಿವಣ್ಣ ಅವರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.
ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





