ಕಳಸ: ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೈತನಿಗೆ ವಂಚನೆ; ಆರೋಪ

ಚಿಕ್ಕಮಗಳೂರು, ಜೂ.7: ಬಡ ಕೃಷಿಕರೊಬ್ಬರು ವ್ಯವಸಾಯ ಸಹಕಾರಿ ಸಂಘದಲ್ಲಿ ಮಾಡಿದ್ದ ಸಾಲವನ್ನು ಮರುಪಾವತಿ ಮಾಡಿ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದಿದ್ದರೂ ಬ್ಯಾಂಕಿನ ನಿರ್ದೇಶಕನೊಬ್ಬ ರೈತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕಳೆದ ಮೂರು ವರ್ಷಗಳಿಂದ ಸಾಲ ಪಡೆದು ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಲ್ಲ ದಾಖಲೆಗಳೊಂದಿಗೆ ಪೊಲೀಸರು ಸೇರಿದಂತೆ ಸಂಬಂಧಿಸಿದವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಜಿಲ್ಲೆಯ ಕಳಸ ಹೋಬಳಿ ವ್ಯಾಪ್ತಿಯ ಗುಳ್ಯ ಗ್ರಾಮದ ವಾಸುದೇವ್ ಎಂಬವರು ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿರುವ ವ್ಯವಸಾಯ ಸಹಕಾರಿ ಸಂಘದಿಂದ ಸಂಸೆ ಸಮೀಪದ ಗುಳ್ಯ ಗ್ರಾಮದ ಸಣ್ಣ ರೈತನಾಗಿರುವ ರುದ್ರಪ್ಪ ಎಂಬವರು 2013ರವರೆಗೆ 1 ಲಕ್ಷ ರೂ ಸಾಲ ಪಡೆದಿದ್ದಾರೆ. ಅನಾರೋಗ್ಯದ ಕಾರಣ ರುದ್ರಪ್ಪ ಅವರು ಬ್ಯಾಂಕ್ ವ್ಯವಹಾರಗಳಿಗೆ ಅಲೆಯಲು ಸಾಧ್ಯವಾಗದ ಕಾರಣಕ್ಕೆ ಅವರ ಸಹೋದರನ ಮಗನಾಗಿರುವ ತನ್ನ ಹೆಸರಿಗೆ ಜಿಪಿಎ ಹೋಲ್ಡರ್ ಮಾಡಿದ್ದರಿಂದ ಬ್ಯಾಂಕ್ ವ್ಯವಹಾರವನ್ನು ಅಂದಿನಿಂದ ತಾನೇ ನಿರ್ವಹಿಸುತ್ತಿದ್ದೇನೆ. ರುದ್ರಪ್ಪ ಅವರು ಕಳಸ ಸಹಕಾರಿ ಸಂಘದಲ್ಲಿ ಮಾಡಿದ್ದ ಈ ಸಾಲವನ್ನು 2013ರಲ್ಲಿಯೇ ಮರು ಪಾವತಿ ಮಾಡಿದ್ದು, ಮತ್ತೆ ಇದೇ ಬ್ಯಾಂಕ್‍ನಲ್ಲಿ ಸಾಲ ಕೇಳಿದಾಗ ಸಾಲ ಕೊಡಲು ಸಾಧ್ಯವಿಲ್ಲ ಎಂದು ಬ್ಯಾಂಕ್‍ನ ವ್ಯವಸ್ಥಾಪಕರು ತಿಳಿಸಿದ್ದರು. ಈ ಕಾರಣಕ್ಕೆ ಜ.15, 2015ರಂದು ಬ್ಯಾಂಕ್‍ನಿಂದ ಸಾಲ ತಿರುವಳಿ ಪ್ರಮಾಣ ಪತ್ರ ಪಡೆದು, ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಿಂಪಡೆದು ಸಂಸೆ ಗ್ರಾಮದ ಚಿ.ಕೊ.ಗ್ರಾಮೀಣ ಬ್ಯಾಂಕ್‍ನಲ್ಲಿ ವ್ಯವಹಾರವನ್ನು ಮುಂದುವರಿಸಿದ್ದೇವೆ.
ಆದರೆ ಸೆ.9.2015ರಂದು ಕಳಸ ಸಹಕಾರಿ ಸಂಘದ ವ್ಯವಸ್ಥಾಪಕ ಮಹಬಲರಾವ್ ಎಂಬವರು ದೂರವಾಣಿ ಕರೆ ಮಾಡಿ ಸಾಲದ ಬಾಕಿಯನ್ನು ಮರುಪಾವತಿ ಮಡಬೇಕೆಂದು ತಿಳಿಸಿದ್ದಾರೆ. ನಂತರ ಅದೇ ಬ್ಯಾಂಕಿನ ನಿರ್ದೇಶಕನಾಗಿರುವ ಕಳಕೋಡು ರವಿಕುಮಾರ್ ಎಂಬವರು ಸಾಲ ಮರುಪಾವತಿ ಮಾಡುವಂತೆ ತಿಳಿಸಿದ್ದು, ಸಾಲ ಮರುಪಾವತಿ ಮಾಡಿ, ಸಾಲ ತಿರುವಳಿ ಪ್ರಮಾಣ ಪತ್ರವನ್ನು ಬ್ಯಾಂಕ್‍ನಿಂದ ಪಡೆದಿದ್ದೇನೆಂದು ತಾನು ತಿಳಿಸಿದ್ದಕ್ಕೆ ರವಿಕುಮಾರ್ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂಬಂಧ ಕುದುರೆಮುಖ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ ವಾಸುದೇವ್, ಈ ಬಗ್ಗೆ ಅನುಮಾನಗೊಂಡ ತಾನು ಕಳಸ ಪತ್ತಿನ ಸಹಕಾರಿ ಸಂಘಕ್ಕೆ ಅರ್ಜಿ ಸಲ್ಲಿಸಿ ತನ್ನ ಬ್ಯಾಂಕ್ ಖಾತೆಯ ಸಾಲದ ವಿವರಗಳನ್ನು ನೀಡುವಂತೆ ಕೋರಿದ್ದೆ. ಆದರೆ ಸಹಕಾರಿ ಸಂಘದ ಅಧ್ಯಕ್ಷ ಮಂಜಪ್ಪಯ್ಯ ಹಾಗೂ ವ್ಯವಸ್ಥಾಪಕ ಮಹಾಬಲರಾವ್, ನೀವು 2013ರಲ್ಲಿ ಕ್ಲಿಯರೆನ್ಸ್ ಪ್ರ.ಪತ್ರ ಪಡೆದಿರುವುದರಿಂದ ಈ ಬಗ್ಗೆ ಯಾವುದೇ ವಿವರ ಕೊಡಲು ಸಾಧ್ಯವಿಲ್ಲ ಎಂದು ಲಿಖಿತ ಪತ್ರ ನೀಡಿದ್ದಾರೆ.
ಈ ಸಂಬಂಧ ತಾನು ಅನುಮಾನಗೊಂಡು ರುದ್ರಪ್ಪ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿದಾಗ 2013ರಿಂದ 2016ರವರೆಗೆ ಬ್ಯಾಂಕ್ ನಿರ್ದೇಶಕ ರವಿಕುಮಾರ್ ಎಂಬವರು ರುದ್ರಪ್ಪ ಅವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ವ್ಯವಸ್ಥಾಕ ಹಾಗೂ ಅಧ್ಯಕ್ಷರ ಸಹಕಾರದಿಂದ ಪದೇ ಪದೇ 1 ಲಕ್ಷದ ವರೆಗೆ ಸಾಲ ಪಡೆದಿದ್ದಾರೆ. ಅಲ್ಲದೇ 25 ಸಾವಿರ ರೂ. ಬೆಳೆ ಸಾಲ ಮನ್ನಾದ ಲಾಭವನ್ನೂ ರವಿಕುಮಾರ್ ಪಡೆದಿದ್ದಾರೆ. ರೈತನ ಹೆಸರಿಗೆ ಬಂದ ಎಲ್ಲ ಸಬ್ಸಿಡಿ ಅನುದಾನವನ್ನೂ ರವಿಕುಮಾರ್ ನಕಲಿ ಸಹಿ ಮೂಲಕ ಪಡೆದು ದುರುಪಯೋಗ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆಂದು ವಾಸುದೇವ್ ಆರೋಪಿಸಿದರು.
ಸಹಕಾರಿ ಸಂಘದ ಅಧ್ಯಕ್ಷ, ನಿರ್ದೇಶಕ, ವ್ಯವಸ್ಥಾಪಕ ಹಾಗೂ ಬ್ಯಾಂಕ್ ಸಿಬ್ಬಂದಿ ಬಡ ಅಮಾಯಕ ರೈತನಿಗೆ ಮಾಡಿದ ವಂಚನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಪೊಲೀಸರು ನಕಲಿ ಸಹಿಯನ್ನು ಪರಿಶೀಲನೆಗೆ ಕಳುಹಿಸಲಾಗಿದ್ದು, ವರದಿ ಬಾರದೇ ಕ್ರಮವಹಿಸಲು ಸಾಧ್ಯವಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಜಿಲ್ಲಾಧಿಕಾರಿ, ಎಸ್ಪಿ, ಡಿಸಿಸಿ ಬ್ಯಾಂಕ್ ಸೇರಿದಂತೆ ಸಿಎಂ, ಪಿಎಂಗೂ ದೂರು ನೀಡಿದ್ದೇನೆ. ಅಲ್ಲಿಂದ ಕ್ರಮವಹಿಸುವಂತೆ ಸಂಬಂಧಿಸಿದವರಿಗೆ ಹಿಂಬರಹ ಬರುತ್ತಿದೆಯೇ ಹೊರತು ಇದುವರೆಗೂ ತನ್ನ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಕಳಸ ಕೃಷಿ ಸಹಕಾರಿ ಬ್ಯಾಂಕಿನಲ್ಲಿ ಸಾವಿರಾರು ಬಡ ಕೃಷಿಕರು ಖಾತೆ ಹೊಂದಿದ್ದು, ತಮ್ಮಂತಹ ನೂರಾರು ಮಂದಿಗೆ ಇದೇ ರೀತಿಯಲ್ಲಿ ವಂಚನೆಯಾಗಿರುವ ಬಗ್ಗೆ ಶಂಕೆ ಕಳಸ ಹೋಬಳಿಯ ಸಾರ್ವಜನಿಕರಿಂದಲೂ ವ್ಯಕ್ತವಾಗಿದೆ. ಆದ್ದರಿಂದ ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಕೂಡಲೇ ತನಿಖೆಕೈಗೊಂಡು ತನ್ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ವಾಸುದೇವ್ ಈ ವೇಳೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಾಸುದೇವ್ ಸಂಬಂಧಿ ವನಿತಾ ಉಪಸ್ಥಿತರಿದ್ದರು.







