ಮತಯಂತ್ರಗಳನ್ನು ಹ್ಯಾಕ್ ಮಾಡಿರಬಹುದೆಂಬ ಬಿ.ಎಲ್.ಶಂಕರ್ ಹೇಳಿಕೆ ಹಾಸ್ಯಾಸ್ಪದ: ಬಿಜೆಪಿ ಮುಖಂಡ ಲೋಕೇಶ್
ಚಿಕ್ಕಮಗಳೂರು, ಜೂ.7: ವಿಧಾನಸಭೆ ಚುನಾವಣೆ ವೇಳೆ ಕೆಲವೆಡೆ ಮತಯಂತ್ರಗಳನ್ನು ಹ್ಯಾಕ್ ಮಾಡಿರಬಹುದೆಂದು ಬುದ್ಧಿವಂತ ರಾಜಕಾರಣಿ ಎನಿಸಿಕೊಂಡಿರುವ ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಬಿ.ಎಲ್.ಶಂಕರ್ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದ್ದು, ಮತಯಂತ್ರಗಳು ಹ್ಯಾಕ್ ಆಗಿದ್ದರೆ ಮುಸ್ಲಿಂ ಮತದಾರರು ಹೆಚ್ಚಾಗಿರುವ ಕೆಲವೊಂದು ಬೂತ್‍ಗಳಲ್ಲಿ ಬಿಜೆಪಿಗೆ 48 ರಿಂದ 59 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ 600ಕ್ಕೂ ಹೆಚ್ಚು ಮತಗಳನ್ನು ಪಡೆದಿದೆ. ಹಾಗಾದರೆ ಮುಸ್ಲಿಂ ಮತಗಳು ಕಾಂಗ್ರೆಸ್‍ಗೆ ಗುತ್ತಿಗೆಯಾಗಿದ್ದವು ಎಂಬುದು ನಿಮಗೆ ಗೊತ್ತಿತ್ತೇ ಎಂದು ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಬಾರಿ ಅಂತರದ ಜಯ ಸಿಕ್ಕಿರುವುದು ಮತಯಂತ್ರಗಳನ್ನು ತಿರುಚಿರುವ ಅನುಮಾನ ನಿಮಗೆ ಬರುವುದು ಸಹಜ. ಏಕೆಂದರೆ ಸಿ.ಟಿ.ರವಿಯವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದಲೂ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಬಡವರು, ರೈತರು, ದೀನದಲಿತರ ಮಹಿಳೆಯರ ನೊಂದವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಳು ಹಂಪೆಯಾಗಿದ್ದ ಚಿಕ್ಕಮಗಳೂರು ಕ್ಷೇತ್ರವನ್ನು ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸುವಂಥಹ ಅಭಿವೃದ್ಧಿ ಕೆಲಸಗಳನ್ನು ನೀವೆಷ್ಟೇ ಕಾಲೆಳೆದರೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದುದರಿಂದಲೇ ಈ ಕ್ಷೇತ್ರದ ಜನ ಸತತ 4ನೆಯ ಬಾರಿಗೆ ರವಿಯವರನ್ನು ಶಾಸಕರನ್ನಾಗಿ ಆರಿಸಿದ್ದಾರೆ. ಅದರಲ್ಲಿಯೂ ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಆದರೆ ನೀವು ಈ ಕ್ಷೇತ್ರದ ಕಡೆ ತಲೆ ಎತ್ತಿಯೂ ನೋಡದೆ ಈ ಕ್ಷೇತ್ರದ ಅಭಿವೃದ್ದಿಯೂ ಮಾಡದೆ, ಈ ಕ್ಷೇತ್ರದ ಪರಿಚಯವೂ ಇಲ್ಲದೆ, ಅಭಿವೃದ್ಧಿಗೆ ಕಲ್ಲು ಹಾಕುತ್ತಿದ್ದ ನಿಮಗೆ ಕ್ಷೇತ್ರದ ಜನ ಸರಿಯಾದ ಪಾಠವನ್ನೇ ಕಲಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಐ.ಟಿ. ಇಲಾಖೆಯವರು ಭ್ರಷ್ಟ ಉದ್ಯಮಿಗಳು ಎಂದು ಶಂಕರ್ ಆರೋಪಿಸಿದ್ದಾರೆ. ಆದರೆ ಬೇರೆ ಬೇರೆ ಪಕ್ಷದ ಭ್ರಷ್ಟ ರಾಜಕಾರಿಗಳ ಮೇಲೆ ದಾಳಿ ಮಾಡಿದರೆ ತುಟಿಬಿಚ್ಚದ ಬಿ.ಎಲ್.ಶಂಕರ್ ಕಾಂಗ್ರೆಸ್‍ನ ಭ್ರಷ್ಟ ಶಾಸಕರು, ಮಂತ್ರಿಗಳ ಮೇಲೆ ಐಟಿ ದಾಳಿಯಾದರೆ ಅದು ಕೇಂದ್ರ ಸರಕಾರದ ಪ್ರಧಾನಮಂತ್ರಿ ಮೋದಿಯವರ ಪಿತೂರಿ ಎನ್ನುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇಂತಹ ರಾಜಕಾರಣಿಗಳಿಂದ ಚಿಕ್ಕಮಗಳೂರಿನ ಜನತೆ ಏನೂ ನಿರೀಕ್ಷೆ ಮಾಡಲಿಕ್ಕೆ ಸಾಧ್ಯವಿಲ್ಲ. ಈ ಕಾರಣಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಟೀಕಿಸಿರುವ ಅವರು, ದೆಹಲಿಯಿಂದ ಕನ್ಯಾಕುಮಾರಿಯವರೆಗೂ ಕಾಂಗ್ರೆಸ್ ನಾಯಕರು ಮತಯಂತ್ರ ಹ್ಯಾಕ್ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಸೋಲನ್ನು ಮುಚ್ಚಿಕೊಳ್ಳುವುದಕ್ಕೆ ಪುಕ್ಕಟೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈಗಲಾದರೂ ಬಿ.ಎಲ್.ಶಂಕರ್ ಕಾನೂನು ಹೋರಾಟಕ್ಕಿಳಿಯಲಿ ಎಂದು ಅವರು ವ್ಯಂಗ್ಯವಾಡಿದ್ದಾರೆ.







