ಚಿಕ್ಕಮಗಳೂರು: ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಿಎಂ, ಡಿಸಿಎಂಗೆ ಕೆಜಿಎಫ್ ನಿಯೋಗ ಮನವಿ

ಚಿಕ್ಕಮಗಳೂರು, ಜೂ.7: ರೈತರ ಸಾಲಮನ್ನಾ ಯೋಜನೆಯಡಿಯಲ್ಲಿ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ ಸಾಲವನ್ನು ಮನ್ನಾ ಮಾಡುವಂತೆ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಉಪಾಸಿ. ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‍ನ ಪ್ರತಿನಿಧಿಗಳ ನಿಯೋಗವು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ ಎಂದು ಕೆಜಿಎಫ್ ಸಂಘಟನೆಯ ಕಾರ್ಯದರ್ಶಿ ತೀರ್ಥ ಮಲ್ಲೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿದೇಶದಿಂದ ಕಾಳುಮೆಣಸು ಆಮದಾಗುತ್ತಿದ್ದು, ಇಲ್ಲಿನ ಮೆಣಸಿನ ಬೆಲೆ ಕುಸಿದಿರುವುದರಿಂದ ಸಂಕಷ್ಟದಿಂದ ಪಾರುಮಾಡಬೇಕಾಗಿ ಮನವಿ ಮಾಡಲಾಯಿತು. ಜೊತೆಗೆ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಕಂದಾಯ ಸಚಿವರ ನೇಮಕದ ನಂತರ ಒತ್ತುವರಿ ಸಮಸ್ಯೆಗೆ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದ್ದಾರೆ. ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದರು.
ಇದೇ ವೇಳೆ ನಿಯೋಗವು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣರವರನ್ನು ಭೇಟಿ ಮಾಡಿದಾಗ ಕಾಫಿ ಬೆಳೆಗಾರ ಸಂಘಟನೆಯ ಸಭೆ ಕರೆದು ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿ, ಮುಖ್ಯಮಂತ್ರಿಯವರೊಂದಿಗೆ ಮಾತನಾಡುವುದಾಗಿಯೂ ತಿಳಿಸಿರುತ್ತಾರೆ. ಸಾಲಮನ್ನಾದ ವಿಚಾರವನ್ನು ಸದ್ಯದಲ್ಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ. ನಂತರ ನಿಯೋಗ ಸಿಎಂ ಕುಮಾರಸ್ವಾಮಿಯವರನ್ನು ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ರವರನ್ನು ಭೇಟಿ ಮಾಡಿದ್ದು, ಒತ್ತುವರಿ ಸಮಸ್ಯೆ ಮತ್ತು ಸಾಲಮನ್ನಾ ವಿಚಾರವಾಗಿ ಪ್ರಸ್ತಾಪಿಸಲಾಗಿದೆ. ಕಾಫಿ ಬೆಳೆಗಾರ ಸಂಘಟನೆಗಳನ್ನೊಳಗೊಂಡಂತೆ ಸಭೆ ಕರೆದು ಬೆಳೆಗಾರರ ಎಲ್ಲಾ ಸಮಸ್ಯೆಗಳ ಬಗ್ಗೆಯೂ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ವೇಳೆ ಬೇಲೂರು ಶಾಸಕ ಲಿಂಗೇಶ್ ಹಾಗೂ ಕೆಜಿಎಫ್ ಅಧ್ಯಕ್ಷ ಜಯರಾಂ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕೆ.ಕೆ.ವಿಶ್ವನಾಥ್, ವಿಶ್ವನಾಥ್, ಎಂ.ಬಿ.ಲಕ್ಷ್ಮಣ್, ಕೆ.ಎಂ.ಹರೀಶ್, ಡಿ.ಎಸ್.ರಘು, ಎಚ್.ಕೆ.ಪ್ರಮೋದ್, ಡಾಚಂಗಪ್ಪ ಇದ್ದರು.







