ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ: ಗಾಯತ್ರಿ ಶಾಂತೇಗೌಡ
ನೈರುತ್ಯ ಪದವೀಧರ-ಶಿಕ್ಷಕರ ಕ್ಷೇತ್ರ ಚುನಾವಣೆ

ಚಿಕ್ಕಮಗಳೂರು, ಜೂ.7: ಈ ಬಾರಿಯ ವಿಧಾನ ಪರಿಷತ್‍ನ ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ ಎಂದು ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ..ಗಾಯತ್ರಿ ಶಾಂತೇಗೌಡ ಹೇಳಿದರು.
ಗುರುವಾರ ನಗರದ ಉಂಡೆ ದಾಸರ ಹಳ್ಳಿಯ ಸೆಂಟ್ ಮೇರಿಸ್ ಶಾಲೆ, ಹಿರೇಮಗಳೂರಿನ ಪ್ರಭುಲಿಂಗಸ್ವಾಮಿ ಪ್ರೌಢ ಶಾಲೆ, ಅಂಬಳೆಯ ಸರ್ಕಾರಿ ಪ್ರೌಢ ಶಾಲೆ, ಸಿರಗಪುರ ಸಾಯಿ ಏಂಜಲ್ಸ್ ಶಾಲೆಗಳಲ್ಲಿ ನೈರುತ್ಯ ಪದವೀಧರ ಕ್ಷೇತ್ರ ಅಭ್ಯರ್ಥಿ ಎಸ್.ಪಿ.ದಿನೇಶ್ ಮತ್ತು ಶಿಕ್ಷಕರ ಕ್ಷೇತ್ರಅಭ್ಯರ್ಥಿ ಕೆ.ಕೆ ಮಂಜುನಾಥ ಕುಮಾರ್ ಪರವಾಗಿ ಮತಯಾಚಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಕ್ರಿಯಾಶೀಲರಾಗಿದ್ದು, ಉತ್ತಮ ಅಭ್ಯರ್ಥಿಗಳಾಗಿದ್ದಾರೆ. ಕಳೆದ ಅವಧಿಯಲ್ಲಿಅಲ್ಪ ಮತಗಳಿಂದ ಸೋತಿದ್ದರು. ಈ ಬಾರಿ ಮತದಾರರು ನಮ್ಮ ಅಭ್ಯರ್ಥಿಗಳ ಪರವಾಗಿ ಒಲವು ತೋರುತ್ತಿದ್ದು ಗೆಲುವು ಖಚಿತವಾಗಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದವರು ಪದವೀಧರರು ಮತ್ತು ಶಿಕ್ಷಕರ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಅವರುಗಳ ಬಗ್ಗೆ ಪದವೀಧರರು ಮತ್ತು ಶಿಕ್ಷಕರು ಅಸಮಾಧಾನದಲ್ಲಿದ್ದಾರೆ. ಎರಡೂ ಕ್ಷೇತ್ರಗಳ ಸಮಸ್ಯೆಗಳು ಮತ್ತು ಸವಾಲುಗಳನ್ನು ಬಲ್ಲವರಾಗಿರುವ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ರಾಜ್ಯಕುರಿ ಮತ್ತುಉಣ್ಣೆ ಮಂಡಳಿ ಮಾಜಿ ನಿರ್ದೇಶಕ ಕೋಟೆ ಆನಂದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ಪುಟ್ಟಸ್ವಾಮಿ, ನಗರಸಭೆ ಸದಸ್ಯ ಯತಿರಾಜನಾಯ್ಡು, ನಗರ ಎಸ್ಸಿ ಘಟಕ ಅಧ್ಯಕ್ಷ ಎಚ್.ಎಸ್.ಜಗದೀಶ್, ಕಾರ್ಯದರ್ಶಿ ಎಚ್.ಎನ್.ಸುರೇಶ್, ಮುಖಂಡರಾದ ಲಕ್ಷ್ಮೀಪುರ ಚಂದ್ರೇಗೌಡ, ಕುಮಾರಣ್ಣ ಹಾಜರಿದ್ದರು.







