ಕೆಲ ಸ್ವಾಮೀಜಿಗಳ ವದಂತಿಯಿಂದ ಸಚಿವ ಸ್ಥಾನ ಕೈತಪ್ಪಿತು: ಬಸವರಾಜ ಹೊರಟ್ಟಿ

ಹುಬ್ಬಳ್ಳಿ, ಜೂ. 8: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡಿದ್ದು ದೊಡ್ಡ ಅಪರಾಧವಾಗಿದೆ. ಕೆಲ ಉಡಾಫೆ ಸ್ವಾಮೀಜಿಗಳು ಧರ್ಮ ಒಡೆಯುತ್ತಾರೆಂಬ ವದಂತಿ ಹಬ್ಬಿಸಿದ ಕಾರಣ ನನಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿದ್ದೆ. ಪಕ್ಷಕ್ಕೆ ಅಂಟಿಕೊಂಡು ನಾನು ಲಿಂಗಾಯತ ಹೋರಾಟ ಮಾಡಿಲ್ಲ. ಅಲ್ಲದೆ, ಈ ಕುರಿತು ಕುಮಾರಸ್ವಾಮಿ ಮತ್ತು ದೇವೇಗೌಡರಿಗೂ ಸ್ಪಷ್ಟಣೆ ನೀಡಿದ್ದೆ ಎಂದರು.
ಸಚಿವ ಸ್ಥಾನ ಹಂಚಿಕೆಯ ಬೆಳವಣಿಗೆ ಗಮನಿಸಿದಾಗ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವೇ ನೇರ ಹೊಣೆ ಎನ್ನುವುದು ಅರ್ಥವಾಗುತ್ತಿದೆ ಎಂದ ಹೊರಟ್ಟಿ, ಕೆಲವರು ಕಾಡಿ-ಬೇಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನನಗೆ ಹಾಗೆ ಮಾಡಲಿಕ್ಕೆ ಮನಸ್ಸಿಲ್ಲ ಎಂದು ಹೇಳಿದರು.
ನನಗೆ ಅನೇಕರು ಫೋನ್ ಕರೆ ಮಾಡಿ, ನಿಮ್ಮಂತ ಅನುಭವಿಗಳು ಸಂಪುಟದಲ್ಲಿ ಇರಬೇಕಿತ್ತೆಂದು ಹೇಳುತ್ತಿದ್ದಾರೆ. ಆದರೆ, ಸಚಿವ ಸ್ಥಾನ ನೀಡುವವರೇ ನನ್ನನ್ನು ಮಂತ್ರಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಷ್ಟ್ರೀಯಾಧ್ಯಕ್ಷ ದೇವೇಗೌಡ ತೀರ್ಮಾನವೇ ಅಂತಿಮ. ಮೇಲ್ಮನೆ ಸಭಾಪತಿ ಮಾಡುವುದು ಪಕ್ಷಕ್ಕೆ ಬಿಟ್ಟದ್ದು ಎಂದು ಹೇಳಿದರು.
ತಾನು ಏಳು ಬಾರಿ ಮೇಲ್ಮನೆ ಸದಸ್ಯನಾಗಿ ಆಯ್ಕೆಯಾಗಿದ್ದು, ಶಿಕ್ಷಕ ಸಮುದಾಯ ನನ್ನನ್ನು ಆಯ್ಕೆ ಮಾಡಿದೆ. ಸಚಿವನಾಗಿದ್ದರೆ ಆ ಸಮುದಾಯಕ್ಕೆ ಹೆಚ್ಚಿನ ಕೆಲಸ ಮಾಡುವ ಅವಕಾಶವಿತ್ತು. ಆದರೆ, ತಾನು ಮಂತ್ರಿಯಾಗಿಲ್ಲ. ಎಂದಿನಂತೆ ಶಾಸಕನಾಗಿ ಕಾರ್ಯ ನಿರ್ವಹಿಸುವೆ ಎಂದರು







