ನಾಲ್ಕು ತಿಂಗಳಿಂದ ಪೌರಕಾರ್ಮಿಕರಿಗೆ ಸಂಬಳ ನೀಡದ ಬಿಬಿಎಂಪಿ: ಆನಂದ್ ಆರೋಪ
ಬೆಂಗಳೂರು, ಜೂ.8: ಪೌರಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳ ನೀಡದೆ ಬಿಬಿಎಂಪಿ ಅಧಿಕಾರಿ ನಿರ್ಲಕ್ಷವಹಿಸುತ್ತಿದ್ದಾರೆ ಎಂದು ಮ್ಯಾನುಯಲ್ ಸ್ಕಾವೆಂಜರ್ಸ್ ವೃತ್ತಿ ಹಾಗೂ ಕೆಲಸ ನಿಷೇಧ ಮತ್ತು ಪುನರ್ವಸತಿಯ ಬೆಂಗಳೂರು ನಗರ ಜಿಲ್ಲಾ ಸದಸ್ಯ ಸಿ.ಎನ್.ಆನಂದ್ ಆರೋಪಿಸಿದ್ದಾರೆ.
ಪೌರಕಾರ್ಮಿಕ ವೃತ್ತಿಯಿಂದಲೇ ಬದುಕುತ್ತಿರುವ ಕಾರ್ಮಿಕರಿಗೆ ಸಂಬಳ ಕೊಡದೆ ಅಧಿಕಾರಿಗಳು ವಂಚಿಸುತ್ತಿದ್ದಾರೆ. ಇದರಿಂದ ಪೌರಕಾರ್ಮಿಕರ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡರೆ ಉದಾಸೀನ ಮಾಡುತ್ತಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂರು ಮಂದಿ ಮಾಡುವ ಕೆಲಸವನ್ನು ಒಬ್ಬ ಪೌರಕಾರ್ಮಿಕನಿಂದಲೆ ಮಾಡಿಸಲಾಗುತ್ತಿದೆ. ಈ ರೀತಿ ಮೈಮುರಿದು ದುಡಿದರೂ ಸಂಬಳ ನೀಡುತ್ತಿಲ್ಲ. ಅಧಿಕಾರಿಗಳ ಈ ನಿರ್ಲಕ್ಷದಿಂದ ಪೌರಕಾರ್ಮಿಕರ ಮಕ್ಕಳ ಮೂಲಭೂತ ಅಗತ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಅವರು ತಿಳಿಸಿದ್ದಾರೆ.
ಆರೋಗ್ಯ ಕಾರ್ಡ್ ನೀಡುತ್ತಿಲ್ಲ: ಪೌರಕಾರ್ಮಿಕರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇದರ ಸಲುವಾಗಿಯೆ ಉಚಿತ ಆರೋಗ್ಯ ತಪಾಸಣೆಗಾಗಿ ಪೌರಕಾರ್ಮಿಕರಿಗೆ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳು ಈ ಆರೋಗ್ಯ ಕಾರ್ಡ್ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪೌರಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಹಾವು, ಚೇಳಿನ ಕಡಿತಕ್ಕೆ ತುತ್ತಾಗುತ್ತಿದ್ದಾರೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ ಹೀಗೆಯೆ ಮುಂದುವರೆದರೆ ಪೌರಕಾರ್ಮಿಕರು ತಮ್ಮ ಕೆಲಸಗಳನ್ನು ಬಂದ್ ಮಾಡಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.







