ದೇವರಾಜ್ ಅರಸು ದೇಶ ಕಂಡ ಶ್ರೇಷ್ಠ ಮುಖ್ಯಮಂತ್ರಿ: ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್

ದಾವಣಗೆರೆ,ಜೂ.08: ದುರ್ಬಲರಿಗೆ ಸಾಮಾಜಿಕ ನ್ಯಾಯ ನೀಡಿ, ಶೋಷಿತರ ಧ್ವನಿಯಾಗಿ ಸಮಾಜ ಸುಧಾರಣೆ ಮಾಡಿದ ದಿ. ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ದೇಶಕಂಡ ಶ್ರೇಷ್ಠ ಮುಖ್ಯಮಂತ್ರಿಯಾಗಿದ್ದರು ಅವರ ದೇಶಸೇವೆ ಅನನ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಅಭಿಪ್ರಾಯ ಪಟ್ಟರು.
ನಗರದ ಎಂ.ಸಿ.ಸಿ. ‘ಎ’ ಬ್ಲಾಕ್‍ನಲ್ಲಿ ಏರ್ಪಡಿಸಲಾಗಿದ್ದ ದೇವರಾಜ್ ಅರಸುರವರ 36ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದೇವರಾಜ್ ಅರಸ್ ರವರು ಭೂಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿಕ ಕಾಯ್ದೆಯನ್ನು ಜಾರಿ ಮಾಡಿ ಲಕ್ಷಾಂತರ ಬಡ ರೈತರಿಗೆ ಭೂಮಿ ನೀಡಿ ಬಡವರ ಪಾಲಿನ ಅನ್ನದಾತರಾಗಿದ್ದಾರೆ. ಬಡವರಿಗೆ ಭಾಗ್ಯಜ್ಯೋತಿ, ಜನತಾ ಮನೆ ನೀಡಿದರಲ್ಲದೇ ಅವರು ಸಾಮಾಜಿಕ ಅನಿಷ್ಟಗಳಾದ ಜೀತಪದ್ದತಿ, ಮಲಹೊರುವ ಪದ್ಧತಿಗಳಿಗೆ ಇತಿಶ್ರೀ ಹಾಡಿದರು. ದೇವರಾಜ್ ಅರಸುರವರು ತಮ್ಮ ಆಡಳಿತದಲ್ಲಿ ದುರ್ಬಲ ವರ್ಗದವರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಅಧಿಕಾರವನ್ನು ಹಿಡಿಯುವ ಅವಕಾಶವನ್ನು ಕಲ್ಪಿಸಿದರು. ಅವರ ಅವಧಿಯಲ್ಲಿ ನಿರೋದ್ಯೋಗ ಪದವೀಧರರಿಗೆ ಸ್ಟೈಫಂಡರಿ ಜಾರಿಗೆ ತಂದು ಸಾವಿರಾರು ಕುಟುಂಬಗಳ ಬದುಕಿಗೆ ಆಸರೆ ಕೊಟ್ಟರು. ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದರು ಎಂದರು.
ಕಾಂಗ್ರೆಸ್‍ನ ಮುಖಂಡರುಗಳಾದ ಲಿಯಾಖತ್ ಅಲಿ, ನವೀದ್, ಅಯಾಜ್, ಸಾಧೀಕ್ ಖಾನ್, ಫಾರುಖ್, ಶಂಕರ್, ಭೀಮೇಶ್, ರಮೇಶ್, ಸಂದೀಪ್, ಸದ್ದಾಂ, ಇಲಿಯಾಜ್, ಫೈರೋಜ್ ಹಾಜರಿದ್ದರು.





