ಜೆಡಿಎಸ್ ಕಾಂಗ್ರೆಸ್ ಎಂದು ತಾರತಮ್ಯ ಮಾಡುವುದಿಲ್ಲ: ನೂತನ ಸಚಿವ ಸಾ.ರಾ.ಮಹೇಶ್

ಮೈಸೂರು,ಜೂ.8: ಚುನಾವಣೆಗೂ ಮುನ್ನ ನಾನು ಒಂದು ಪಕ್ಷದ ಅಭ್ಯರ್ಥಿ, ಶಾಸಕನಾಗಿ ಸಚಿವನಾದ ಬಳಿಕ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ಇಲ್ಲಿ ಜೆಡಿಎಸ್ ಕಾಂಗ್ರೆಸ್ ಎಂದು ತಾರತಮ್ಯ ಮಾಡುವುದಿಲ್ಲ ಎಂದು ನೂತನ ಸಚಿವ ಸಾ.ರಾ.ಮಹೇಶ್ ಹೇಳಿದರು.
ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳಿ ದಂಪತಿ ಸಮೇತ ಶ್ರೀಚಾಮುಂಡೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಗೂ ಮುಂಚೆ ಪಕ್ಷ ಎಂದು ನೋಡುತ್ತೇನೆ. ಚುನಾವಣೆ ಬಳಿಕ ಎಲ್ಲರೂ ನನಗೆ ಒಂದೇ. ಕಾಂಗ್ರೆಸ್ ಪಕ್ಷದವರು ಜೆಡಿಎಸ್‍ನವರು ಎಂದು ತಾರತಮ್ಯ ಮಾಡುವುದಿಲ್ಲ. ಎಲ್ಲರ ಸಹಕಾರದಿಂದ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ನಾನು ಮೂರು ಬಾರಿ ಶಾಸಕನಾಗಲು ನಮ್ಮ ನಾಯಕರಾದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಕೆ ಆರ್ ನಗರ ಕ್ಷೇತ್ರದ ಜನತೆ ಕಾರಣ . ಜೆಡಿಎಸ್ ಪಕ್ಷ ನನಗೆ ನಿರೀಕ್ಷೆಗೂ ಮೀರಿದ ಅವಕಾಶ ನೀಡಿದೆ. ಮೈತ್ರಿ ಸರ್ಕಾರದ ಇತಿ ಮಿತಿ ಅರಿತು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕೆ ಆರ್ ನಗರ ಶಾಸಕನಾಗಿ ಚುಂಚನಕಟ್ಟೆ ಶ್ರೀರಾಮ ಸಹಕಾರ ಕಾರ್ಖಾನೆಗೆ ಶಾಶ್ವತ ಪರಿಹಾರ ಮಾಡಬೇಕು ಅನ್ನೋ ಆಸೆ ಇತ್ತು . ಸಚಿವನಾಗಿ ಈಗ ಆ ಕೆಲಸ ಮಾಡೇ ಮಾಡುತ್ತೇನೆ. ಈ ಭಾಗದ ಕಬ್ಬು ಬೆಳಗಾರರಿಗೆ ಈ ಕಾರ್ಖಾನೆ ಆದಾಯದ ಮೂಲವಾಗಿದೆ. ಈ ಕಾರ್ಖಾನೆ ನಂಬಿರುವ ಕಾರ್ಮಿಕರ ಉದ್ಯೋಗಗಳು ಉಳಿಯುತ್ತವೆ. ರೈತರ ಬೆಳೆಗಳಿಗೆ ನೀರು ಕೊಡುವುದು ನನ್ನ ಪ್ರಾಥಮಿಕ ಆದ್ಯತೆ. ಇಂತಹ ಹುದ್ದೆ, ಖಾತೆ ಬೇಕು ಎಂದು ನಾನು ಕೇಳಿಲ್ಲ. ಪಕ್ಷ ಕೊಡುವ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ಕೊಡಗು ಉಸ್ತುವಾರಿ ಕೂಡ ನಾನು ಕೇಳಿಲ್ಲ. ಒಂದು ವೇಳೆ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಸಾ.ರಾ.ಮಹೇಶ್ ಆಭಿಮಾನಿಗಳು, ಅವರು ಚಾಮುಂಡಿ ಬೆಟ್ಟಕ್ಕೆ ತೆರಳುವ ಮುನ್ನ ನೂರು ಕೆ.ಜಿಯ ಸೇಬಿನ ಹಾರ ಹಾಕಿದರು.
ಈ ಸಂದರ್ಭ ಮೈಸೂರು ಮಾಜಿ ಮೇಯರ್ ಎಂ.ಜೆ,ರವಿಕುಮಾರ್, ಆರ್.ಲಿಂಗಪ್ಪ, ಜಿ.ಪಂ.ಮಾಜಿ ಸದಸ್ಯ ದ್ವಾರಕೀಶ್ ಹಾಗೂ ಇತರರು ಈಡುಗಾಯಿ ಒಡೆದು ಹರಕೆ ಸಮರ್ಪಿಸಿದರು.







