ಪ್ರಯಾಣಿಕರ ತಂಗುದಾಣ ಮತ್ತು ಇನ್ನರ್‌ವೀಲ್ ಸರ್ಕಲ್ ಉದ್ಘಾಟನೆ
ಇನ್ನರ್‌ವೀಲ್ ಕ್ಲಬ್‌ನ ರಜತ ವರ್ಷ

ಮೂಡುಬಿದಿರೆ, ಜೂ.8: ಇಲ್ಲಿನ ಇನ್ನರ್‌ವೀಲ್ ಕ್ಲಬ್‌ನ ರಜತ ವರ್ಷದ ಯೋಜನೆಯ ಅಂಗವಾಗಿ ಸ್ವರಾಜ್ಯ ಮೈದಾನ ಬಳಿ ರಚನೆಗೊಂಡ ಇನ್ನರ್‌ವೀಲ್ ಸರ್ಕಲ್ ಮತ್ತು ವಿದ್ಯಾಗಿರಿಯಲ್ಲಿ ನಿರ್ಮಾಣವಾದ ಪ್ರಯಾಣಿಕರ ತಂಗುದಾಣವನ್ನು ಐ.ಡಬ್ಯು ಜಿಲ್ಲೆ 318ರ ಜಿಲ್ಲಾಧ್ಯಕ್ಷೆ ಜಯಶ್ರೀ ಅರಸ್ ಗುರುವಾರ ಉದ್ಘಾಟಿಸಿದರು.
ಆ ಬಳಿಕ ಪ್ಯಾರಡೈಸ್ ಹಾಲ್‌ನಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಂದು ಸೇವಾ ಸಂಸ್ಥೆಗಳು ತಮ್ಮ ಸಮಾಜ ಮುಖಿ ಕಾರ್ಯಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಆ ಮೂಲಕ ಮೂಡುಬಿದಿರೆ ಇನ್ನರ್‌ವೀಲ್ ಕ್ಲಬ್ ಮುಂದುವರಿಯುತ್ತಿದ್ದು ಇದರ ರಜತ ವರ್ಷದ ಯೋಜನೆಗಳು ಎಲ್ಲರ ಗಮನಸೆಳೆಯುವ ಮೂಲಕ ಶ್ಲಾಘನಾರ್ಹ ಯೋಜನೆ ಎನಿಸಿಕೊಂಡಿದೆ ಎಂದರು. ಇದೇ ಸಂದರ್ಭ ಪಾಲಡ್ಕದಲ್ಲಿ ಐದು ಕುಟುಂಬಗಳಿಗೆ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಇನ್ನರ್‌ವೀಲ್ ಕ್ಲಬ್ ನಿರ್ಮಿಸಿದ ಶೌಚಾಲಯಗಳ ಪರಿಕರಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿಯಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ದೇಶಿಯ ಚಿಂತನೆಗಳ ಮೂಲಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಇನ್ನರ್‌ವೀಲ್ ಕ್ಲಬ್‌ನ ಸೇವೆ ಪ್ರಶಂಸನೀಯ. ಪ್ರತಿಯೊಬ್ಬರಿಗು ಸಮಾಜದ ಋಣ ಇದೆ.
ಜನೋಪಯೋಗಿ ಕೆಲಸಗಳನ್ನು ಮಾಡುವ ಮೂಲಕ ಸಮಾಜದ ಋಣವನ್ನು ನಾವು ತೀರಿಸಬೇಕು. ನೆರಳು ಮತ್ತು ದಾರಿ ತೋರಿಸುವ ಕೆಲಸ ಇನ್ನರ್‌ವೀಲ್ ಕ್ಲಬ್‌ನಿಂದಾಗಿದೆ ಎಂದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮತ್ತಿತರರು ಭಾಗವಹಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್ ಉಪಸ್ಥಿತರಿದ್ದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಸ್ವಾಗತಿಸಿದರು. ಶಾಲಿನಿ ಹರೀಶ್ ನಾಯಕ್ ನಿರೂಪಿಸಿದರು. ಮೀನಾಕ್ಷಿ ನಾರಾಯಣ ವಂದಿಸಿದರು.







