ಬೀದಿ ನಾಟಕ ಕಲಾವಿದರಿಗೆ ಸಾಮಾಜಿಕ ಭದ್ರತೆ ಅಗತ್ಯವಿದೆ: ಅಂಜನಪ್ಪ ಲೋಕಿಕರೆ

ಮೈಸೂರು,ಜೂ.8: ಸರ್ಕಾರ ಬೀದಿ ನಾಟಕ ಕಲಾವಿದರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಂಜನಪ್ಪ ಲೋಕಿಕೆರೆ ಒತ್ತಾಯಿಸಿದರು.
ಬೋಗಾದಿಯ ಧ್ವನ್ಯಲೋಕದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಮೈಸೂರು ಜಿಲ್ಲಾ ಘಟಕದ ಮೈಸೂರು ವಿಭಾಗಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.1942ರಲ್ಲಿಯೇ ಜನಪದ ಕಲಾವಿದರು ಬೀದಿ ನಾಟಕದ ಮೂಲಕ ಸ್ವಾತಂತ್ರ್ಯ ಚಳುವಳಿ ನಡೆಸಿದರು. ಬೀದಿ ನಾಟಕ ಎಲ್ಲರಿಗೂ ಅರಿವು ಮೂಡಿಸುತ್ತಿದೆ. ಸರ್ಕಾರದ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದೆ. ಆದರೆ ಅವರಿಗೆ ಸಾಮಾಜಿಕ ಭದ್ರತೆಯೇ ಇಲ್ಲದಾಗಿದೆ. ಯಾವ ರೀತಿ, ಆಶಾ, ಅಂಗನವಾಡಿ, ಚಾಲಕರು ಎಲ್ಲರೂ ಸಂಘಟಿತರಾಗಿದ್ದಾರೋ ಅದೇ ರೀತಿ ಬೀದಿನಾಟಕ ಕಲಾವಿದರೂ ಒಂದಾಗಬೇಕು. ಸಂಘಟಿತರಾಗಿ ಹೋರಾಟ ನಡೆಸಬೇಕು. ಆದರೆ ನಾವು ಸಂಘಟಿತರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಎರಡು ಸಭೆ ನಡೆಸಿ ವಿಭಾಗ ಮಟ್ಟದ ಸಮ್ಮೇಳನ ನಡೆಸಲಾಗುತ್ತಿದೆ. ನಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಕಟ್ಟಡ ಕಾರ್ಮಿಕರು ಕಲ್ಯಾಣ ನಿಧಿಯ ಮೂಲಕ ಪರಿಹಾರ ಪಡೆದುಕೊಳ್ಳುತ್ತಾರೆ. ಅದೇ ರೀತಿ ಬೀದಿನಾಟಕ ಕಲಾವಿದರಿಗೂ ಸೌಲಭ್ಯ ಸಿಗಬೇಕು. ಯಾವ ರೀತಿ ಮಗು ಅಳದೇ ತಾಯಿ ಹಾಲು ಕೊಡಲ್ಲವೋ ಅದೇ ರೀತಿ ನಾವು ಕೇಳದಿದ್ದರೆ ಸರ್ಕಾರ ಕೂಡ ಕೊಡಲ್ಲ. ವಿಧಾನ ಸೌಧಕ್ಕೆ ಮುತ್ತಿಗೆ ಹಾಕಬೇಕು. ರಾಜ್ಯ ಕಮಿಟಿ ಸಭೆ ಕರೆದು, ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಭೆ ಕರೆದು ಒಂದೊಂದು ಜಿಲ್ಲೆಗಳಿಂದ ಎಷ್ಟೆಷ್ಟು ಕಲಾವಿದರು ಭಾಗವಹಿಸಬೇಕು ಎಂಬುದನ್ನು ನಿಗದಿಪಡಿಸಿ ನಮ್ಮ ಶಕ್ತಿ ತೋರಿಸಬೇಕು. ದಿನಾಂಕವನ್ನು ನಿಗದಿಪಡಿಸಿ, ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು ಎಂದರು.
ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ ಮಾತನಾಡಿ, ಬೀದಿನಾಟಕದ ಕಲಾವಿದರಿಗೆ ಸ್ಪಷ್ಟತೆಯಿತ್ತು. ತಾರ್ಕಿಕ ಸಿದ್ಧಾಂತವಿತ್ತು. ಸಾಮಾಜಿಕ ಬದಲಾವಣೆ ಬಯಸಿ ಕಟ್ಟಿದ ತಂಡಗಳು ಗ್ರಾಮ ಗ್ರಾಮಗಳಿಗೆ ನಿಸ್ವಾರ್ಥವಾಗಿ ತೆರಳಿ ಜನರೊಟ್ಟಿಗೆ ದೊಡ್ಡಧ್ವನಿಯಲ್ಲಿ ಅಭಿವ್ಯಕ್ತಿಗೊಳಿಸಿದ ಚಳುವಳಿ ಬೀದಿನಾಟಕ. ರಸ್ತೆ ದುರಸ್ತಿ, ನೀರಿನ ಸಮಸ್ಯೆ, ದರಹೆಚ್ಚಳ ಹೀಗೆ ಯಾವುದಾದರೂ ಇರಬಹುದು, ಅವುಗಳ ಕುರಿತು ಬೀದಿನಾಟಕದ ಕುರಿತು ಅರಿವು ಮೂಡಿಸುವುದು, ಕಲೆಯ ಮೂಲಕ ಸಾಮಾಜಿಕವಾಗಿ ಹೇಗೆ ಪ್ರತಿಬಿಂಬಿಸುತ್ತಿವೆ ಎನ್ನುವುದು ಮುಖ್ಯವಾಗುತ್ತದೆ ಎಂದರು.
ಸಭೆಯಲ್ಲಿ ರಾಜ್ಯಾಧ್ಯಕ್ಷ ಗ್ಯಾರಂಚಿ ರಾಮಣ್ಣ, ರಾಜ್ಯ ಸಮಿತಿ ಸದಸ್ಯ ಆರ್.ಚಕ್ರಪಾಣಿ, ಜಿಲ್ಲಾಧ್ಯಕ್ಷರಾದ ಎ.ಸಲ್ಮಾ,ರಾಜ್ಯ ಸಮಿತಿ ಸದಸ್ಯರಾದ ಸವಿತಾ ಮತ್ತಿತರರು ಉಪಸ್ಥಿತರಿದ್ದರು.







