ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಮಂಡ್ಯ ಜಿಲ್ಲೆಯಲ್ಲಿ ಶೇ.83.92 ಮತದಾನ

ಮಂಡ್ಯ, ಜೂ.8: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಯ ಮತದಾನ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಶುಕ್ರವಾರ ಜರುಗಿದ್ದು, ಶೇ.83.92 ರಷ್ಟು ಮತದಾನವಾಗಿದೆ.
ನಗರದಲ್ಲಿ 3 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮಳವಳ್ಳಿ, ಮದ್ದೂರು, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೃ.ರಾ.ಪೇಟೆ ತಾಲೂಕುಗಳಲ್ಲಿ ಒಂದೊಂದು ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು.
ಪಾಂಡವಪುರ ತಾಲೂಕಿನಲ್ಲಿ ಅತಿ ಹೆಚ್ಚು ಶೇ.92.19ರಷ್ಟು ಮತ ಚಲಾವಣೆಯಾದರೆ, ಶ್ರೀರಂಗಪಟ್ಟಣದಲ್ಲಿ ಅತಿ ಕಡಿಮೆ ಶೇ.71.60ರಷ್ಟು ಮತದಾನವಾಗಿದೆ.
ನಾಗಮಂಗಲ ಶೇ.91.16, ಮಂಡ್ಯ ಮತಗಟ್ಟೆ 19 ರಲ್ಲಿ ಶೇ.81.05, ಮತಗಟ್ಟೆ 19ಎ ರಲ್ಲಿ ಶೇ.82.47, ಮತಗಟ್ಟೆ 20ರಲ್ಲಿ ಶೇ.80. 06, ಮದ್ದೂರು ಶೇ.82.79, ಕೆ.ಆರ್.ಪೇಟೆ ಶೇ.88.53 ಹಾಗೂ ಮಳವಳ್ಳಿ ಶೇ.86.25ರಷ್ಟು ಮತಗಳು ಚಲಾವಣೆಯಾಗಿವೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಮಂಡ್ಯ ಜಿಲ್ಲೆಯಲ್ಲಿ 3,180 ಪುರುಷರು, 1,676 ಮಹಿಳೆಯರು, 1 ಇತರ ಸೇರಿದಂತೆ ಒಟ್ಟು 4,857 ಮತದಾರರಿದ್ದಾರೆ. ಈ ಪೈಕಿ 2,768 ಪುರುಷರು, 1307 ಮಹಿಳೆಯರು, 1 ಇತರ ಸೇರಿದಂತೆ ಒಟ್ಟು 4,076 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಮಧ್ಯಾಹ್ನವಾಗುತ್ತಿದ್ದಂತೆ ಮತದಾನ ಚುರುಕು ಪಡೆದುಕೊಂಡಿತು. ಶಿಕ್ಷಕ ಮತದಾರರು ಸರಥಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ದೃಶ್ಯ ಕಂಡು ಬಂದಿತು. ಜಿಲ್ಲೆಯ 9 ಮತಗಟ್ಟೆ ಕೇಂದ್ರಗಳ ಹೊರಗಡೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದುದು ಕಂಡು ಬಂತು.
ಮತಗಟ್ಟೆ ಆವರಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜೂ.12ರಂದು ಮತ ಎಣಿಕೆ ನಡೆಯಲಿದೆ.







