ಒಎನ್‌ಜಿಸಿ ವಿದೇಶ್ ಲಿ.ಮೂಲಕ ಪ್ರಥಮ ಕಚ್ಚಾ ತೈಲದ ಸರಕು ತುಂಬಿದ ನೌಕೆ ಮಂಗಳೂರಿಗೆ ಆಗಮನ
ಮಂಗಳೂರು, ಜೂ. 8: ಒಎನ್ ಜಿಸಿಯ ಅಂಗ ಸಂಸ್ಥೆಯಾದ ಒಎನ್‌ಜಿಸಿ ವಿದೇಶ್ ಲಿಮಿಟೆಡ್ ಜೊತೆಗೆಗಿನ ಪಾಲುದಾರಿಕೆಯ ಕಚ್ಚಾ ತೈಲದ ಪ್ರಥಮ ಸರಕು ತುಂಬಿದ ಹಡುಗು ಮಂಗಳೂರಿನ ಎಂಆರ್‌ಪಿಎಲ್‌ಗೆ ಅಬುದಾಬಿಯ ಲೋವರ್ ಝುಕುಮಾ ಮೂಲಕ ನವ ಮಂಗಳೂರು ಬಂದರಿಗೆ ಬಂದು ತಲುಪಿದೆ ಎಂದು ಎಂದು ಒಎನ್‌ಜಿಸಿಯ ಅಧ್ಯಕ್ಷ ಶಶಿಶಂಕರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯಲ್ಲಿಂದು ಅವರು ತಿಳಿಸಿದ್ದಾರೆ. ಸುಮಾರು 690 ಬಿಲಿಯನ್ ಬ್ಯಾರಲ್ ಕಚ್ಚಾ ತೈಲ ಜೂ. 2ರಂದು ಎಂ.ಟಿ.ವಾಪಾಃ ಹಡಗಿನ ಮೂಲಕ ಒಎನ್‌ಜಿಸಿ ವಿದೇಶ್ ಕಂಪೆನಿಯ ಮೂಲಕ ಎಂ ಆರ್‌ಪಿಎಲ್‌ಗೆ ಸಾಗಿಸಲು ಮಂಗಳೂರು ತಲುಪಿದೆ.
ಎಂಆರ್‌ಪಿಎಲ್ ಖರೀದಿಸಿದ ಕಚ್ಚಾ ತೈಲವನ್ನು ದೇಶದ ಸುರಕ್ಷತೆಯ ದೃಷ್ಟಿಯಿಂದ ಸಂಗ್ರಹಿಸಲಾಗುವ ಇಂಧನ ಸಂಗ್ರಹಕ್ಕಾಗಿ ಬಳಸಲಾಗುತ್ತಿದೆ ಎಂದು ಶಶಿ ಶಂಕರ್ ತಿಳಿಸಿದ್ದಾರೆ. 1965ರಲ್ಲಿ ಇರಾನ್‌ನಲ್ಲಿ ಸ್ಥಾಪನೆಯಾದ ಭಾರತ ಮೂಲದ ವಿದೇಶಿ ಸಂಸ್ಥೆಯಾದ ಹೈಡ್ರೋಕಾರ್ಬನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪುನಾರಚನೆಗೊಂಡು ಒಎನ್‌ಜಿಸಿ ವಿದೇಶ್ 1989ರಿಂದ ಪ್ರಪಂಚದ 20 ದೇಶಗಳಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಇಂಧನದ 40 ಯೋಜನೆಗಳನ್ನು ಸುಮಾರು 150.86 ಸಾವಿರ ಕೋಟಿ ರೂ ವೆಚ್ಚದಲ್ಲಿ ಕಾರ್ಯಗತಗೊಳಿಸುತ್ತಿದೆ. ಅಝರ್ ಬೈಝಾನ್, ಬಾಂಗ್ಲದೇಶ, ಬ್ರೆಝಿಲ್, ಕೊಲಾಂಬಿಯಾ, ಇರಾಕ್, ಇಸ್ರೇಲ್, ಇರಾನ್, ಕಝಕಿಸ್ತಾನ್, ಲಿಬಿಯಾ, ಮೊಝಾಂಬಿಯಾ, ಮ್ಯಾನ್‌ಮಾರ್, ನಮಿಬಿಯಾ,ರಶ್ಯಾ, ದಕ್ಷಿಣ ಸುಡಾನ್, ಸುಡಾನ್, ಸಿರಿಯಾ ಯುನೈಟೆಡ್ ಅರಬ್ ಎಮಿರೇಟ್ಸ್, ವೆನಿಝುಲಾ ಮತ್ತು ನ್ಯೂಝಿಲ್ಯಾಂಡ್‌ಗಳಲ್ಲಿ ಎಪ್ರಿಲ್ 1,2018ರವರೆಗೆ 711 ಮಿಲಿಯನ್ ಮೆಟ್ರಿಕ್ ಟನ್ ತೈಲ ಮತ್ತು ನೈಸರ್ಗಿಕ ಅನಿಲವನ್ನು ಉತ್ಫಾದಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದೆ ಎಂದು ಶಶಿ ಶಂಖರ್ ತಿಳಿಸಿದ್ದಾರೆ.
ಒಎನ್‌ಜಿಸಿಯ ಅಂಗ ಸಂಸ್ಥೆಯಾದ ಎಂಆರ್‌ಪಿಎಲ್ ಮಂಗಳೂರಿನಲ್ಲಿ ವಾರ್ಷಿಕ 15 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಸಂಸ್ಕರಣೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.ಎಂಆರ್‌ಪಿಎಲ್ ಅಬುದಾಬಿಯ ನ್ಯಾಶನಲ್ ಆಯಿಲ್ ಕಂಪೆನಿಯ ಮೂಲಕ ಕಚ್ಚಾ ತೈಲವನ್ನು 2007ರಿಂದಲೂ ಆಮದು ಮಾಡಿಕೊಂಡು ಮಾರಿಷಸ್‌ಗೆ (ಗ್ರೇಡ್ 2)ಇಂಧನ ತೈಲವನ್ನು ಸರಬರಾಜು ಮಾಡುತ್ತಿದೆ. ಎಂಆರ್‌ಪಿಎಲ್ ಮುಂದೆ ಯೂ ಒಎನ್‌ಜಿಸಿ ವಿದೇಶ್ ಸಂಸ್ಥೆಯ ಮೂಲಕ ವಿದೇಶದ ಹಲವು ತೈಲ ಕಂಪೆನಿಗಳಿಂದ ಕಚ್ಚಾ ತೈಲವನ್ನು ಮುಂದಿನ ಹಂತದಲ್ಲೂ ಪಡೆದುಕೊಳ್ಳಲಿದೆ ಎಂದು ಶಶಿ ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಒಎನ್‌ಜಿಸಿ ವಿದೇಶ್ ಲಿಮಿಟೆಡ್‌ನ ಆಡಳಿ ನಿರ್ದೇಶಕ ನರೇಂದ್ರ ಕುಮಾರ್ ವರ್ಮಾ, ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ವೆಂಕಟೇಶ್ , ಒಎನ್‌ಜಿಸಿಯ ಹಣಕಾಸಿ ವಿಭಾಗದ ನಿರ್ದೇಶಕ ಎ.ಕೆ.ಸಾಹು ಮೊದಲಾದವರು ಉಪಸ್ಥಿತರಿದ್ದರು. ಎಂಆರ್‌ಪಿಎಲ್ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಸ್ವಾಗತಿಸಿದರು.







