2004 ರಿಂದಲೇ ಶೇ.8 ರಷ್ಟು ಬಡ್ಡಿ ಸೇರಿಸಿ ಹಣ ಪಾವತಿಸಲು ಹೈಕೋರ್ಟ್ ನಿರ್ದೇಶನ
ರಾಜ್ಯ ಹೈಕೋರ್ಟ್ ಸಿಬ್ಬಂದಿಯ ಪರಿಷ್ಕೃತ ವೇತನ ವಿಚಾರ

ಬೆಂಗಳೂರು, ಜೂ.8: ರಾಜ್ಯ ಹೈಕೋರ್ಟ್ ಸಿಬ್ಬಂದಿಯ ಪರಿಷ್ಕೃತ ವೇತನ ಹಾಗೂ ಹಿಂಬಾಕಿ ಬಿಡುಗಡೆಯ ಜೊತೆಗೆ 2004ರಿಂದ ಇಲ್ಲಿಯವರೆಗೆ ಶೇ.8ರಷ್ಟು ಬಡ್ಡಿಯನ್ನೂ ಸೇರಿಸಿ ಹಣ ಪಾವತಿಸಬೇಕೆಂದು ರಾಜ್ಯ ಹಣಕಾಸು ಇಲಾಖೆಗೆ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಕೇಂದ್ರ ಸರಕಾರಿ ನೌಕರರ ವೇತನ ಶ್ರೇಣಿಗೆ ಅನುಗುಣವಾಗಿ ಹೈಕೋರ್ಟ್ ನೌಕರರ ವೇತನ ಪರಿಷ್ಕರಣೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸದ ರಾಜ್ಯ ಸರಕಾರದ ವಿರುದ್ಧ ನಿವೃತ್ತ ನೌಕರ ನಿಜಗುಣಿ ಎಂ. ಕರಡಿಗುಡ್ಡ ಮತ್ತು ಕರ್ನಾಟಕ ಹೈಕೋರ್ಟ್ ನೌಕರರ ಕಲ್ಯಾಣ ಸಂಘ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಪೀಠದಲ್ಲಿ ಶುಕ್ರವಾರ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ರಾಜ್ಯ ಹಣಕಾಸು ಇಲಾಖೆಯು ಹೈಕೋರ್ಟ್ ಸಿಬ್ಬಂದಿಗೆ 2012ರಿಂದ ಇಲ್ಲಿಯವರೆಗೆ ಶೇ.8ರಷ್ಟು ಬಡ್ಡಿಯನ್ನು ಸೇರಿಸಿ ಹಣವನ್ನು ಪಾವತಿಸುತ್ತಿದ್ದಾರೆ. ಹೈಕೋರ್ಟ್ ಆದೇಶದಂತೆ 2004ರಿಂದಲೇ ಬಡ್ಡಿಯನ್ನು ಸೇರಿಸಿ ಹಣವನ್ನು ಪಾವತಿಸಬೇಕು. ಆದರೆ, ಪಾವತಿಸುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಹೈಕೋರ್ಟ್ ಸಿಬ್ಬಂದಿಗೆ 2004ರಿಂದಲೇ ಶೇ.8ರಷ್ಟು ಬಡ್ಡಿಯನ್ನು ಸೇರಿಸಿ ಜೂ.27ರೊಳಗೆ ಹಣವನ್ನು ಪಾವತಿಸಬೇಕೆಂದು ಆದೇಶಿಸಿತು.







