ಏರ್ ಇಂಡಿಯಾದಲ್ಲಿ ವೇತನ ವಿಳಂಬ: ಅಸಹಕಾರಕ್ಕೆ ಪೈಲಟ್‌ಗಳ ನಿರ್ಧಾರ

ಹೊಸದಿಲ್ಲಿ, ಜೂ. 8: ವೇತನ ವಿಳಂಬವಾಗುತ್ತಿರುವುದರಿಂದ ಏರ್ ಇಂಡಿಯಾದ ಆಡಳಿತ ಮಂಡಳಿಯೊಂದಿಗಿನ ಸಹಕಾರವನ್ನು ನಿಲ್ಲಿಸಲಿದ್ದೇವೆ ಎಂದು ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘಟನೆ (ಐಸಿಪಿಎ) , ಏರ್ ಇಂಡಿಯಾ ಪೈಲಟ್‌ಗಳ ಒಕ್ಕೂಟ ಶುಕ್ರವಾರ ಎಚ್ಚರಿಸಿದೆ. ವೇತನ ಪಾವತಿ ನಿಯಮಿತವಾಗುವವರೆಗೆ ಅಸಹಕಾರ ಮುಂದುವರಿಯಲಿದೆ. ಅನಂತರ ಕ್ರಮ ಬದ್ಧ ಕಾರ್ಯಾಚರಣೆ ಮರು ಸ್ಥಾಪಿಸಲಾಗುವುದು ಎಂದು ಐಸಿಪಿಎಯ ಕೇಂದ್ರ ಕಾರ್ಯಕಾರಿ ಸಮಿತಿ ಹಾಗೂ ಪ್ರಾದೇಶಿಕ ಕಾರ್ಯಕಾರಿ ಸಮಿತಿ (ಆರ್‌ಇಸಿ) ತನ್ನ ಪತ್ರದಲ್ಲಿ ಹೇಳಿದೆ.
ಸಮಯಕ್ಕೆ ಸರಿಯಾಗಿ ವೇತನ ನೀಡದೇ ಇರುವುದರಿಂದ ಹಣಕಾಸಿನ ಒತ್ತಡ ಹಾಗೂ ಮಾನಸಿಕ ನೋವು ಉಂಟಾಗುತ್ತಿದೆ. ಇದು ವಿಮಾನ ಸುರಕ್ಷೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿದೆ ಎಂದು ದಿಲ್ಲಿಯಲ್ಲಿ ಜೂ. 6ರಂದು ನಡೆದ ಆರ್‌ಇಸಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪತ್ರ ಹೇಳಿದೆ. ಈ ಹಿನ್ನೆಲೆಯಲ್ಲಿ ವೇತನ ಪಾವತಿ ನಿಯಮಿತಗೊಳಿಸುವವರೆಗೆ ಆಡಳಿತ ಮಂಡಳಿಯೊಂದಿಗೆ ಸಹಕಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಆರ್‌ಇಸಿ ನಿರ್ಧರಿಸಿದೆ. ವೇತನ ಪಾವತಿಸಿದ ಬಳಿಕ ಕ್ರಮಬದ್ದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದೆ.





