ಶಿರೂರಿನಲ್ಲಿ ‘ಡ್ರಮ್ಮರ್’ ಶಿವಮಣಿಯಿಂದ ಸಂಗೀತ ಶಾಲೆ

ಶಿರೂರು (ಹಿರಿಯಡ್ಕ), ಜೂ.8: ಅಂತಾರಾಷ್ಟ್ರೀಯ ಖ್ಯಾತಿಯ ‘ಡ್ರಮ್ಮರ್’ ಹಾಗೂ ಚಲನಚಿತ್ರರಂಗದ ಸಂಗೀತ ಸಂಯೋಜಕ ಶಿವಮಣಿ ಅವರು ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀ ಯೊಂದಿಗೆ ಸೇರಿ ಶಿರೂರಿನಲ್ಲಿ ಶಿರೂರು ಮಠಕ್ಕೆ ಸೇರಿದ ನಾಲ್ಕು ಎಕರೆ ಜಾಗದಲ್ಲಿ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಲಿದ್ದಾರೆ.
ಶಿರೂರು ಶ್ರೀಗಳ ಜನ್ಮನಕ್ಷತ್ರ ಆಚರಣೆಯ ಅಂಗವಾಗಿ ಶಿರೂರು ಮೂಲ ಮಠದಲ್ಲಿ ಇಂದು ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಂಗೀತ ಶಾಲೆಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.
ಇದು ತಾನು ಭಾರತದಲ್ಲಿ ಸ್ಥಾಪಿಸುತ್ತಿರುವ ಮೂರನೇ ಸಂಗೀತ ಶಾಲೆಯಾಗಿದ್ದು, ಇದರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ವಿದೇಶಿ ಸಂಗೀತದ ಶಿಕ್ಷಣ, ತರಬೇತಿಯನ್ನು ನೀಡಲಾಗುತ್ತದೆ. ದೇಶ ಹಾಗೂ ವಿದೇಶಗಳ ಖ್ಯಾತನಾಮ ಸಂಗೀತಕಾರರನ್ನು ಕರೆಸಿ ಅವರಿಂದ ಪ್ರದರ್ಶನವನ್ನೂ ಏರ್ಪಡಿಸ ಲಾಗುತ್ತದೆ ಎಂದ ಶಿವಮಣಿ, 2ರಿಂದ ಮೂರು ವರ್ಷಗಳಲ್ಲಿ ಸಂಗೀತ ಶಾಲೆ ಇಲ್ಲಿ ತಲೆ ಎತ್ತಲಿದೆ ಎಂದರು.
ಸಂಗೀತವೇ ನನ್ನ ಉಸಿರಾಗಿದ್ದು, ಸಂಗೀತವೇ ಸ್ವಾಮೀಜಿ ಹಾಗೂ ನನ್ನನ್ನು ಒಟ್ಟುಗೂಡಿಸಿದೆ. ಕಳೆದ 28 ವರ್ಷಗಳಿಂದ ನಾವಿಬ್ಬರೂ ಒಡನಾಡಿಗಳಾಗಿದ್ದು, ಸ್ವಾಮೀಜಿಗಳ ಸಂಗೀತ ಜ್ಞಾನ ನನಗೆ ಅಚ್ಚರಿ ಮೂಡಿಸುತ್ತದೆ. ಅವರು ಎಲ್ಲಾ ಸಂಗೀತ ಉಪಕರಣಗಳನ್ನು ಲೀಲಾಜಾಲವಾಗಿ ನುಡಿಸಬಲ್ಲರು ಎಂದ ಶಿವಮಣಿ ಸಂಗೀತದಲ್ಲಿ ಶಾಂತಿ ಇದೆ ಎಂದರು.
ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಹಲವು ಸಮಾಜಮುಖಿ ಯೋಜನೆಯ ಘೋಷಣೆ ಮಾಡಿದರು. ಇವುಗಳಲ್ಲಿ ಶಿರೂರಿನಂಥ ತೀರಾ ಗ್ರಾಮೀಣ ಭಾಗದಲ್ಲಿ ಪದವಿ ಪೂರ್ವ ಕಾಲೇಜೊಂದರ ಆರಂಭ ಹಾಗೂ ಗೋಶಾಲೆಯ ನಿರ್ಮಾಣವೂ ಸೇರಿದೆ.
ಮಠಕ್ಕೆ ಸೇರಿದ ಜಾಗದಲ್ಲಿ ಪದವಿ ಪೂರ್ವ ಕಾಲೇಜಿನ ನಿರ್ಮಾಣಕ್ಕಾಗಿ ಇದೇ ಸಂದರ್ಭದಲ್ಲಿ ಶಿಲಾನ್ಯಾಸವನ್ನು ನೆರವೇರಿಸಲಾಯಿತು. ಅದೇ ರೀತಿ ಸುಸಜ್ಜಿತ ಗೋಶಾಲೆಯೊಂದರ ಆರಂಭಕ್ಕೆ ಶಿಲಾನ್ಯಾಸವನ್ನೂ ನೆರವೇರಿಸ ಲಾಯಿತು. ಅಲ್ಲದೇ ಪಶುಪಕ್ಷಿಗಳಿಗೆ ಹಣ್ಣುಗಳನ್ನು ಒದಗಿಸಲು ಹಣ್ಣಿನ ತೋಟವೊಂದನ್ನು ನಿರ್ಮಿಸಲು ಅವರು ಗಣ್ಯರೊಂದಿಗೆ ಸೇರಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು.
ಅಲ್ಲದೇ ಮಠಕ್ಕೆ ಸೇರಿದ 15 ಎಕರೆ ಜಾಗದಲ್ಲಿ ಅರಣ್ಯವನ್ನು ಬೆಳೆಸಲು ಮಲ್ಪೆಯ ಸಂವೇದನಾ ಫೌಂಡೇಷನ್‌ಗೆ ಸ್ವಾಮೀಜಿ ಇದೇ ಸಂದರ್ಭದಲ್ಲಿ ಜಾಗದ ದಾಖಲೆ ಪತ್ರವನ್ನು ಹಸ್ತಾಂತರಿಸಿದರು. ಈ ಜಾಗದಲ್ಲಿ ಉತ್ಕೃಷ್ಟ ಗುಣಮಟ್ಟ ದಟ್ಟ ಕಾಡನ್ನು ಬೆಳೆಸಿ, ಅದನ್ನು ಸಂರಕ್ಷಿಸಲು ತಮ್ಮ ಫೌಂಡೇಷನ್ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅದರ ಮುಖ್ಯಸ್ಥ ಪ್ರಕಾಶ್ ಮಲ್ಪೆ ತಿಳಿಸಿದರು.
ಸ್ವಾಮೀಜಿ ಅವರ ಜನ್ಮನಕ್ಷತ್ರದ ಪ್ರಯುಕ್ತ ಶಿರೂರು ಮೂಲ ಮಠದಲ್ಲಿ ಶಿವಮಣಿ ಅವರ ಡ್ರಮ್ ವಾದನ ಕಚೇರಿ ವಿಶೇಷವಾಗಿ ನಡೆಯಿತು. ಡ್ರಮ್ ಸೇರಿದಂತೆ ವಿವಿಧ ಉಪಕರಣಗಳಂದ ಶಿವಮಣಿ ಸಂಗೀತವನ್ನು ನುಡಿಸಿ ಸೇರಿದ ಶಿರೂರುಶ್ರೀಗಳ ಅಭಿಮಾನಿಗಳು ಹಾಗೂ ಅವರನ್ನು ಜನ್ಮದಿನದ ಸಂದರ್ಭದಲ್ಲಿ ಅಭಿನಂದಿಸಲು ಬಂದಿದ್ದ ಉಡುಪಿಯ ಗಣ್ಯರನ್ನು ಮಂತ್ರಮುಗ್ಧಗೊಳಿಸಿದರು.







