ಬೆಂಗಳೂರು ಅಭಿವೃದ್ಧಿಗೆ ನೀಲನಕ್ಷಾ ಕ್ರಿಯಾ ತಂಡ ರಚನೆ: ಅರ್ಜಿ ವಿಚಾರಣೆಯನ್ನು ಜೂ.11ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, ಜೂ.8: ಬೆಂಗಳೂರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಲು ಬೆಂಗಳೂರು ನೀಲನಕ್ಷಾ ಕ್ರಿಯಾ ತಂಡವನ್ನು (ಬಿಬಿಪಿಎಜಿ) ರಚನೆಯನ್ನು ಪ್ರಶ್ನಿಸಿ ಸಂಸದ ರಾಜೀವ್ ಚಂದ್ರಶೇಖರ್ ಮತ್ತು ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಬಿಬಿಪಿಎಜಿ ರಚನೆ ಕುರಿತು ಸರಕಾರವು ಶುಕ್ರವಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿತ್ತು. ಅದರಂತೆ ಅರ್ಜಿಯನ್ನು ನ್ಯಾಯಪೀಠ ಶುಕ್ರವಾರ ಕೈಗೆತ್ತಿಕೊಂಡಿತ್ತು. ಬಿಬಿಪಿಎಜಿ ಕುರಿತು ಸರಕಾರ ನಿಲುವು ಏನು? ಎಂದು ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರನ್ನು ಕೇಳಿದರು.
ಅದಕ್ಕೆ ಪೊನ್ನಣ್ಣ ಉತ್ತರಿಸಿ, ಪ್ರಕರಣದ ಕುರಿತು ನ್ಯಾಯಾಲಯದ ಮನದಲ್ಲಿರುವ ವಿಚಾರದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಕೋರ್ಟ್ ಮನದ ಮಾತನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಿಬಿಪಿಎಜಿ ರಚನೆ ಆದೇಶವನ್ನು ವಾಪಸ್ ಪಡೆಯುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ಸೋಮವಾರ ಅಧಿಕೃತ ಮೆಮೊ ಸಲ್ಲಿಸಿ ತಿಳಿಸಲಾಗುವುದು ಎಂದು ತಿಳಿಸಿದರು. ಇದರಿಂದ ನ್ಯಾಯಪೀಠ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.







