‘ಅನಿಕೇತನ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಉಡುಪಿ, ಜೂ.8: ಆರ್ಟಿಸ್ಟ್ ಫೋರಂ ವತಿಯಿಂದ ಉಡುಪಿಯ ಗ್ಯಾಲರಿ ದೃಷ್ಠಿಯಲ್ಲಿ ಹಮ್ಮಿಕೊಳ್ಳಲಾದ ಮಂಗಳೂರಿನ ಕಲಾವಿದ ಪವನ್ ಕುಮಾರ್ ಅತ್ತಾವರ್ ಅವರ ನಾಲ್ಕು ದಿನಗಳ ‘ಅನಿಕೇತನ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ವನ್ನು ಮಂಗಳೂರು ಎಕ್ಸ್‌ಪರ್ಟ್ ಗ್ರೂಪ್ ಆಫ್ ಇನ್ಸಿಟಿಟ್ಯೂಟ್ಸ್‌ನ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಲೆಯಲ್ಲಿ ಕಲ್ಪನೆ, ಪರಿಕಲ್ಪನೆಯ ಜೊತೆ ಕಲಾವಿದನ ಬದ್ಧತೆ ಕೂಡ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರು ಕೂಡ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಾಗ ಸುಖಿ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕಲಾವಿದ ರಮೇಶ್ ರಾವ್ ಮಾತನಾಡಿ, ಸರಕಾರ ಬದಲಾದಂತೆ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರುಗಳನ್ನು ಕೂಡ ಬದಲಾಯಿಸುತ್ತಿರುವುದರಿಂದ ಕಲಾವಿದರಿಗೆ ಕಷ್ಟವಾಗಿದೆ. ಹೀಗಾಗಿ ಕಲಾ ವಿದರ ಗೋಳುಗಳನ್ನು ಕೇಳುವವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಮಣಿಪಾಲ ಮಿಡಿಯಾ ನೆಟ್‌ವರ್ಕ್‌ನ ವಿನೋದ್ ಕುಮಾರ್, ಮಂಗಳೂರಿನ ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಶುಭ ಹಾರೈಸಿದರು. ಕಾವಿದ ಓಂ ಪ್ರಕಾಶ್ ಉಪಸ್ಥಿತರಿದ್ದರು.
ಫೋರಂನ ಸಕು ಪಾಂಗಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಪವನ್ ಕುಮಾರ್ ಅತ್ತಾವರ ವಂದಿಸಿದರು. ಒಟ್ಟು 30 ಕಲಾಕೃತಿ ಗಳನ್ನು ಇಲ್ಲಿ ಪ್ರದರ್ಶಿಸಲಾಗಿದ್ದು, ಜೂ.11ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ 7ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ಇದೆ.







