ಆಸ್ಟ್ರಿಯ: 60 ಇಮಾಮರ ಉಚ್ಚಾಟಿಸುವ ಸಾಧ್ಯತೆ
ಟರ್ಕಿ ನಿಧಿಯಿಂದ ನಡೆಯುವ 7 ಮಸೀದಿಗಳ ಮುಚ್ಚುಗಡೆ

ವಿಯನ್ನಾ (ಆಸ್ಟ್ರಿಯ), ಜೂ. 8: ಟರ್ಕಿಯಿಂದ ನಿಧಿಗಳನ್ನು ಪಡೆಯುತ್ತಿರುವ 60 ಇಮಾಮರು ಮತ್ತು ಅವರ ಕುಟುಂಬಗಳನ್ನು ಆಸ್ಟ್ರಿಯ ಉಚ್ಚಾಟಿಸುವ ಸಾಧ್ಯತೆಯಿದೆ ಎಂದು ದೇಶದ ಆಂತರಿಕ ಸಚಿವ ಹರ್ಬರ್ಟ್ ಕಿಕಿ ಶುಕ್ರವಾರ ತಿಳಿಸಿದರು.
‘ರಾಜಕೀಯ ಇಸ್ಲಾಮ್’ ವಿರುದ್ಧದ ದಮನ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ನುಡಿದರು. ‘‘ಈ ಕ್ರಮಗಳು ಸುಮಾರು 60 ಇಮಾಮರ ಮೇಲೆ ಪ್ರಭಾವ ಬೀರಬಹುದಾಗಿದೆ’’ ಎಂದು ಆಸ್ಟ್ರಿಯದ ಸಮ್ಮಿಶ್ರ ಸರಕಾರದ ಕಿರಿಯ ಭಾಗೀದಾರ ಕಡು ಬಲಪಂಥೀಯ ಫ್ರೀಡಂ ಪಾರ್ಟಿಯ ಕಿಕಿ ಹೇಳಿದರು.
ಒಟ್ಟು 150 ಮಂದಿ, ದೇಶದಲ್ಲಿ ವಾಸಿಸುವ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವಿಯೆನ್ನಾದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ನುಡಿದರು.
ಅದೇ ವೇಳೆ, ಇಲ್ಲಿನ 7 ಮಸೀದಿಗಳನ್ನೂ ಮುಚ್ಚಲು ಆಸ್ಟ್ರಿಯ ನಿರ್ಧರಿಸಿದೆ.
ಟರ್ಕಿಯ ನಿಧಿಯಿಂದ ನಡೆಯುವ ಮಸೀದಿಯೊಂದರಲ್ಲಿ, ಮೊದಲನೇ ಮಹಾಯುದ್ಧದ ದೃಶ್ಯಗಳನ್ನು ಅಭಿನಯಿಸುತ್ತಿದ್ದ ಮಕ್ಕಳು ಸತ್ತಂತೆ ಮಲಗಿದ ದೃಶ್ಯಗಳು ಎಪ್ರಿಲ್ ತಿಂಗಳಲ್ಲಿ ಬಹಿರಂಗಕ್ಕೆ ಬಂದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಘಟನೆ ಬಗ್ಗೆ ಧಾರ್ಮಿಕ ವ್ಯವಹಾರಗಳ ಪ್ರಾಧಿಕಾರ ತನಿಖೆ ನಡೆಸಿದೆ.
‘‘ಸಮಾನಾಂತರ ಸಮಾಜಗಳು, ರಾಜಕೀಯ ಇಸ್ಲಾಮ್ ಮತ್ತು ಮೂಲಭೂತವಾದಕ್ಕೆ ನಮ್ಮ ದೇಶದಲ್ಲಿ ಅವಕಾಶವಿಲ್ಲ’’ ಎಂದು ಆಡಳಿತಾರೂಢ ಪೀಪಲ್ಸ್ ಪಾರ್ಟಿಯ ಚಾನ್ಸಲರ್ ಸೆಬಾಸ್ಟಿಯನ್ ಕರ್ಝ್ ಹೇಳಿದರು.
ಧಾರ್ಮಿಕ ಹುದ್ದೆಗಳನ್ನು ವಹಿಸಿಕೊಂಡವರು ವಿದೇಶಿ ನಿಧಿಗಳನ್ನು ಪಡೆಯುವುದರ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಈ ಇಮಾಮರು ಉಲ್ಲಂಘಿಸಿದ್ದಾರೆ ಎಂಬುದಾಗಿ ಸರಕಾರ ಶಂಕಿಸಿದೆ ಎಂದು ಆಂತರಿಕ ಸಚಿವರು ತಿಳಿಸಿದರು.







