ಸಿರಿಯ: ರಶ್ಯ ವಾಯು ದಾಳಿಯಲ್ಲಿ ಕನಿಷ್ಠ 44 ಸಾವು

ಬೈರೂತ್, ಜೂ. 8: ಸಿರಿಯದ ಬಂಡುಕೋರ ನಿಯಂತ್ರಣದ ಇದ್ಲಿಬ್ ಪ್ರಾಂತದ ಗ್ರಾಮವೊಂದರ ಮೇಲೆ ಗುರುವಾರ ರಾತ್ರಿ ರಶ್ಯ ನಡೆಸಿದೆಯೆನ್ನಲಾದ ವಾಯು ದಾಳಿಗಳಲ್ಲಿ ಕನಿಷ್ಠ 44 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಶುಕ್ರವಾರ ತಿಳಿಸಿದೆ.
‘‘ಗ್ರಾಮೀಣ ಇದ್ಲಿಬ್‌ನ ಉತ್ತರ ಭಾಗದಲ್ಲಿರುವ ಝರ್ದಾನ ಗ್ರಾಮದ ಮೇಲೆ ರಶ್ಯಕ್ಕೆ ಸೇರಿದ್ದು ಎನ್ನಲಾದ ಯುದ್ಧವಿಮಾನಗಳು ಗುರುವಾರ ರಾತ್ರಿ ದಾಳಿಗಳನ್ನು ನಡೆಸಿವೆ. 11 ಮಹಿಳೆಯರು ಮತ್ತು 6 ಮಕ್ಕಳು ಸೇರಿದಂತೆ ಕನಿಷ್ಠ 44 ಮಂದಿ ಈ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಈ ವಲಯದಲ್ಲಿ ಒಂದು ದಾಳಿಯಲ್ಲಿ ಸಂಭವಿಸಿದ ಅತ್ಯಧಿಕ ಸಾವು-ನೋವುಗಳಾಗಿವೆ’’ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ವೀಕ್ಷಣಾಲಯದ ನಿರ್ದೇಶಕ ರಮಿ ಅಬ್ದುರ್ರಹ್ಮಾನ್ ತಿಳಿಸಿದರು.
ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸತ್ತವರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದರು.
Next Story





