ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟನ್ನು ಭಾರತ ನಿವಾರಿಸಬೇಕು: ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ

ವಾಶಿಂಗ್ಟನ್, ಜೂ. 8: ಹೂಡಿಕೆ ಮತ್ತು ‘ಸರ್ವರನ್ನೊಳಗೊಂಡ ಬೆಳವಣಿಗೆ’ ಕಾರ್ಯಸೂಚಿಗೆ ಪೂರಕವಾಗಿ ಭಾರತ ತನ್ನ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಶುಕ್ರವಾರ ಹೇಳಿದೆ.
ಮರಳಿ ಬಾರದ ಸಾಲದ ಸಮಸ್ಯೆಯನ್ನು ನಿಭಾಯಿಸುವಲ್ಲಿ ಭಾರತ ಪ್ರಗತಿ ಸಾಧಿಸಿದೆ ಹಾಗೂ ನಗದು ಚಲಾವಣೆ ಸಮಸ್ಯೆಗೆ ಸಂಬಂಧಿಸಿ ಅದು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಐಎಂಎಫ್ ವಕ್ತಾರ ಜೆರಿ ರೈಸ್ ತಿಳಿಸಿದರು.
ಎರಡು ವಾರಗಳಿಗೊಮ್ಮೆ ನಡೆಯುವ ತನ್ನ ಪತ್ರಿಕಾಗೋಷ್ಠಿಯಲ್ಲಿ, ಭಾರತದ ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
‘‘ವಸೂಲಿಯಾಗದ ಸಾಲಗಳು ಇದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಮೊದಲ ಕ್ರಮಗಳಾಗಿವೆ. ಇದೀಗ ಆರಂಭಿಕ ಹಂತದಲ್ಲಿದೆ, ಆದರೆ, ಇದೊಂದು ಉತ್ತೇಜನಕಾರಿ ಬೆಳವಣಿಗೆಯಾಗಿದೆ ಎಂದು ನಾವು ಭಾವಿಸುತ್ತೇವೆ’’ ಎಂದು ರೈಸ್ ಹೇಳಿದರು.
ವಸೂಲಾಗದ ಸಾಲವು 2017 ಡಿಸೆಂಬರ್ ಕೊನೆಯ ವೇಳೆಗೆ 8.31 ಲಕ್ಷ ಕೋಟಿ ರೂಪಾಯಿ ಆಗಿತ್ತು.





