ಪರೀಕ್ಷೆಯಲ್ಲಿ ‘ಧನುಶ್’ ಪಿರಂಗಿ ಯಶಸ್ವಿ ಸೇನೆಗೆ ನಿಯೋಜನೆಗೆ ಕ್ಷಣಗಣನೆ

ಸಾಂದರ್ಬಿಕ ಚಿತ್ರ
ಜಬಲ್ಪುರ, ಜೂ. 8: ಭಾರತದ ಮೊದಲ ದೇಶೀ ನಿರ್ಮಿತ, ದೀರ್ಘ ವ್ಯಾಪ್ತಿಯ ಪಿರಂಗಿ ‘ಧನುಶ್’ ಪೋಖರಣ್ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ‘ಧನುಶ್’ ಅನ್ನು ಸೇನೆಗೆ ನಿಯೋಜಿಸುವ ದಾರಿ ಸುಗಮವಾಗಿದೆ ಎಂದು ಹಿರಿಯ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಜೂನ್ 2ರಿಂದ 6ರ ವರೆಗೆ ಆರು ‘ಧನುಶ್’ ಪಿರಂಗಿಯಿಂದ ತಲಾ 50 ಶೆಲ್ಗಳನ್ನು ಉಡಾಯಿಸಲಾಗಿದೆ ಎಂದು ಗನ್ ರವಾನೆ ಕಾರ್ಖಾನೆ (ಜಿಸಿಎಫ್)ಯ ಹಿರಿಯ ಪ್ರಧಾನ ಪ್ರಬಂಧಕ ಎಸ್.ಕೆ. ಸಿಂಗ್ ಜಬಲ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಧನುಶ್’ 155 ಎಂಎಂ 45 ಎಂಎಂ ಕ್ಯಾಲಿಬರ್ ಪಿರಂಗಿ. ಇದನ್ನು ‘ದೇಶೀ ಬೋಫರ್ಸ್’ ಎಂದು ಕರೆಯಲಾಗುತ್ತದೆ. ಜಿಸಿಎಫ್ಗೆ ‘ಧನುಶ್’ ಯೋಜನೆ 2011 ಅಕ್ಟೋಬರ್ನಲ್ಲಿ ದೊರಕಿತ್ತು. ಮೂಲ ಮಾದರಿಯನ್ನು 2014ರಲ್ಲಿ ತಯಾರಿಸಲಾಗಿತ್ತು. 4,200 ಸುತ್ತು ಉಡಾಯಿಸಿದ ಬಳಿಕ ಹೆಚ್ಚುವರಿ 11 ಮೂಲ ಮಾದರಿಯನ್ನು ತಯಾರಿಸಲಾಯಿತು. ಸಿಕ್ಕಿಂ, ಲೇಹ್ನ ಶೀತ ಪರಿಸ್ಥಿತಿಯಲ್ಲಿ; ಬಾಲಸೂರ್, ಒರಿಸ್ಸಾ, ಝಾನ್ಸಿಯ ಬಬಿನಾದ ಉಷ್ಣ ಪರಿಸ್ಥಿತಿಯಲ್ಲಿ ಹಾಗೂ ರಾಜಸ್ಥಾನದ ಪೋಖರಣ್ ಮರುಭೂಮಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈ ಪಿರಂಗಿ ಯಶಸ್ವಿಯಾಗಿದೆ. ಎರಡು ವರ್ಷಗಳ ಹಿಂದೆ ಪೋಖರಣ್ನಲ್ಲಿ ನಡೆದ ಪರೀಕ್ಷೆಯ ಸಂದರ್ಭ ಹೋವಿಟ್ಜರ್ ಪಿರಂಗಿಯ ಮೂತಿ ಹಾಗೂ ಬ್ಯಾರಲ್ ಸ್ಫೋಟಗೊಂಡಿತ್ತು ಎಂದು ಸಿಂಗ್ ತಿಳಿಸಿದ್ದಾರೆ.







