ಉಗ್ರರಿಗೆ ನೆರವು ನೀಡುವ ದೇಶಗಳ ಪಟ್ಟಿಯಿಂದ ತಪ್ಪಿಸಲು ಪಾಕ್ ಕಸರತ್ತು

ಇಸ್ಲಾಮಾಬಾದ್, ಜೂ. 8: ಪಾಕಿಸ್ತಾನವು ಕಪ್ಪು ಪಟ್ಟಿಗೆ ಸೇರುವುದನ್ನು ತಡೆಯಲು, ಭಯೋತ್ಪಾದನೆಗೆ ನಿಧಿ ಪೂರೈಕೆ ಮತ್ತು ಕಪ್ಪುಹಣ ಬಿಳುಪು ವಿರುದ್ಧದ ನೂತನ ಕರಡು ಕ್ರಿಯಾ ಯೋಜನೆಯನ್ನು ದೇಶದ ಉಸ್ತುವಾರಿ ಸರಕಾರವು ಮರುಪರಿಶೀಲನೆ ನಡೆಸುತ್ತಿದೆ.
ಭಯೋತ್ಪಾದಕರ ನಿಧಿ ಪೂರೈಕೆ ಮೇಲೆ ನಿಗಾ ಇಡುವ ಸಂಸ್ಥೆ ‘ಆರ್ಥಿಕ ಕ್ರಮ ಕಾರ್ಯ ಪಡೆ’ (ಎಫ್‌ಎಟಿಎಫ್)ಯ ಪೂರ್ಣಾಧಿವೇಶನವು ಜೂನ್ 24ರಿಂದ 29ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲು ನಿಗದಿಯಾಗಿದೆ.
ಪಾಕಿಸ್ತಾನವು ತನ್ನ ಕ್ರಿಯಾ ಯೋಜನೆಯನ್ನು ಪರಿಶೀಲನೆಗಾಗಿ ಎಫ್‌ಎಟಿಎಫ್‌ಗೆ ಸಲ್ಲಿಸಬೇಕಾಗಿದೆ.
ಪಾಕಿಸ್ತಾನದ ಕ್ರಿಯಾ ಯೋಜನೆಯನ್ನು ಎಫ್‌ಎಟಿಎಫ್ ತಿರಸ್ಕರಿಸಿದರೆ, ದೇಶವು ಭಯೋತ್ಪಾದಕರಿಗೆ ನಿಧಿ ಪೂರೈಸುವ ದೇಶಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯನ್ನು ಎದುರಿಸುತ್ತಿದೆ.
ಪಾಕಿಸ್ತಾನವು ಇದೇ ಕ್ರಿಯಾ ಯೋಜನೆಯನ್ನು ಕಪ್ಪು ಹಣ ಬಿಳುಪು ಕುರಿತ ಏಶ್ಯ ಪೆಸಿಫಿಕ್ ಗ್ರೂಪ್ (ಎಪಿಜಿ)ಗೆ ಸಲ್ಲಿಸಿತ್ತು. ಎಪಿಜಿಯು ಹಲವು ವಿಷಯಗಳ ಬಗ್ಗೆ ಸ್ಪಷ್ಟೀಕರಣ ಕೇಳಿತ್ತು. ಈ ಸ್ಪಷ್ಟೀಕರಣಗಳನ್ನು ಸಲ್ಲಿಸುವ ಎರಡು ದಿನಗಳ ಮೊದಲು ಪಾಕಿಸ್ತಾನವು ಕ್ರಿಯಾ ಯೋಜನೆಯನ್ನು ಪರಿಷ್ಕರಿಸಿದೆ.







