ಕಥುವಾ ಬಾಲಕಿ ಪರ ವಕೀಲೆಗೆ ‘ವರ್ಷದ ಮಹಿಳಾ ಸಾಧಕಿ’ ಪುರಸ್ಕಾರ

ಹೊಸದಿಲ್ಲಿ, ಜೂ.8: ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಕಥುವಾ ಬಾಲಕಿಯ ಕುಟುಂಬದ ಪರ ವಕೀಲರಾದ ದೀಪಿಕಾ ಸಿಂಗ್ ರಜಾವತ್‌ರನ್ನು ‘ವರ್ಷದ ಮಹಿಳಾ ಸಾಧಕಿ’ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
‘ಇಂಡಿಯನ್ ಮರ್ಚಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ’ಯ ಮಹಿಳಾ ವಿಭಾಗ ನೀಡುವ ಈ ಪ್ರತಿಷ್ಠಿತ ಪುರಸ್ಕಾರವನ್ನು ಮುಂಬೈಯಲ್ಲಿ ಜೂನ್ 11ರಂದು ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಪರ ಕಾನೂನು ಹೋರಾಟ ನಡೆಸುವಲ್ಲಿ ದೀಪಿಕಾ ತೋರಿರುವ ದಿಟ್ಟತನ, ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಪರಿಗಣಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಬಲಪಂಥೀಯ ರಾಜಕೀಯ ಪಕ್ಷಗಳಿಂದ ಬೆದರಿಕೆಯಿದ್ದರೂ ದೀಪಿಕಾ ತನ್ನ ಹೋರಾಟ ಮುಂದುವರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಪುರಸ್ಕಾರದಿಂದ ನೈತಿಕ ಸ್ಥೈರ್ಯ ಹೆಚ್ಚಿದ್ದು ಹೋರಾಟವನ್ನು ಮುಂದುವರಿಸಲು ಪ್ರೋತ್ಸಾಹ ದೊರೆತಿದೆ. ಆದರೆ ದೇಶವು ದುಷ್ಟ ವ್ಯವಹಾರದಿಂದ ಮುಕ್ತವಾದರೆ ಅದುವೇ ತನಗೆ ದೊರಕುವ ನಿಜವಾದ ಪುರಸ್ಕಾರವಾಗಿದೆ ಎಂದು ದೀಪಿಕಾ ಸಿಂಗ್ ಪ್ರತಿಕ್ರಿಯಿಸಿದ್ದಾರೆ.





