ಚುನಾವಣೆಯಲ್ಲಿ ಸೋತಿದ್ದರೂ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ: ಜೆಡಿಎಸ್ ಪರಾಜಿತ ಅಭ್ಯರ್ಥಿ ಮಂಜುನಾಥ್

ಹನೂರು,ಜೂ.09: ಕ್ಷೇತ್ರದ ಜನರು ಈ ಬಾರಿಯ ಚುನಾವಣೆಯಲ್ಲಿ ನನಗೆ 45000 ಮತಗಳನ್ನು ನೀಡಿ ಉತ್ತಮ ಬೆಂಬಲ ನೀಡಿದ್ದಾರೆ. ನಾನು ಸೋತಿದ್ದರೂ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಕ್ಷೇತ್ರ ಬಿಡದೆ ಸದಾ ಕ್ಷೇತ್ರದ ಜನತೆಯ ಒಡನಾಟದಲ್ಲಿದ್ದು, ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಎಮ್ ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷದ ಅವಧಿಯಲ್ಲಿ ಇಲ್ಲಿನ ಶಾಸಕರು ಕ್ಷೇತ್ರದ ಅಭಿವೃದ್ದಿಯನ್ನು ಕಡೆಗಣಿಸಿದ್ದರು. ಇದರಿಂದ ಜನತೆ ಮೂಲ ಸೌಕರ್ಯದಿಂದ ವಂಚಿತರಾಗಿ ತಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಇದನ್ನು ಮನಗಂಡು ಕ್ಷೇತ್ರದ ಜನತೆಗೆ ಸೇವೆ ನೀಡುವ ಉದ್ದೇಶದಿಂದ ಚುನಾವಣೆಗೂ ಮುನ್ನ ಕ್ಷೇತ್ರಕ್ಕೆ ಆಗಮಿಸಿ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ್ದೆನು. ಬಳಿಕ ಬದಲಾದ ರಾಜಕೀಯದ ಬೆಳವಣಿಗೆಯಿಂದ ಜೆಡಿಎಸ್‍ನಿಂದ ಸ್ಪರ್ಧಿಸಿದೆನು. ಮತ ಪ್ರಚಾರದ ವೇಳೆ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜನತೆ ನನನ್ನು ತಮ್ಮ ಮನೆ ಮಗನಾಗಿ ಕಂಡು ಉತ್ತಮ ಸಹಕಾರ ನೀಡಿದ್ದರು. ಈ ದಿಸೆಯಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಹೊಂದಲಾಗಿತ್ತು. ಜನತೆ ನನಗೆ ಸುಮಾರು 45000 ಮತಗಳನ್ನು ನೀಡಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಆಗಾಗಿ ಕ್ಷೇತ್ರದ ಮತದಾರರಿಗೆ ನಾನು ಯಾವಾಗಲು ಚಿರಋಣಿಯಾಗಿರುತ್ತೇನೆ. ಅಲ್ಲದೆ ನಾನು ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಹೋಗುವುದಿಲ್ಲ. ಜನತೆ ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಸದಾ ಒಡನಾಟದಲ್ಲಿ ಇರುತ್ತೇನೆಂದು ತಿಳಿಸಿದರು.
ಕೈಗಾರಿಕೆ ಸ್ಥಾಪಿಸಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕಲ್ಪಿಸುವ ಗುರಿ: ಜನತೆ ಉದ್ಯೋಗವನ್ನು ಹರಸಿ ಗುಳೆ ಹೋಗುವುದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಹನೂರು ಸಮೀಪದ 45 ಎಕರೆ ಪ್ರದೇಶದಲ್ಲಿ ಕೈಗಾರಿಕೆಯನ್ನು ಸ್ಥಾಪಿಸುವುದರ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು: ರಾಜ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು, ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಆಗಾಗಿ ನಮ್ಮದೇ ಆದ ಸರ್ಕಾರ ಇದ್ದು, ಕ್ಷೇತ್ರದಲ್ಲಿ ಸರ್ಕಾರದ ಸವಲತ್ತಿನಿಂದ ವಂಚಿತರಾಗಿರುವ ಜನರನ್ನು ಗುರುತಿಸಿ ಸರ್ಕಾರದ ಸೌಕರ್ಯವನ್ನು ಒದಗಿಸಲು ಅಗತ್ಯ ಕ್ರಮ ವಹಿಸಿಲಾಗುವುದು. ಜೊತೆಗ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ, ಮುಂದೆ ಬರುವಂತಹ ಪಟ್ಟಣ ಪಂಚಾಯತ್ , ಪಾರ್ಲಿಮೆಂಟ್ ಚುನಾವಣೆ ಜಿಪಂ, ತಾಪಂಗೆ ಗ್ರಾಪಂ ನಮ್ಮ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲು ಈಗಿನಿಂದಲೇ ಪಣ ತೋಡಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜು, ಜಿಪಂ ಮಾಜಿ ಸದಸ್ಯ ನಾಗೇಂದ್ರಮೂರ್ತಿ, ಮುಖಂಡರಾದ ಪೊನ್ನಾಚಿ ಮಹದೇವಸ್ವಾಮಿ, ಮುಳ್ಳೂರು ಶಿವಮಲ್ಲು, ಶಿವಮೂರ್ತಿ, ರಾಜಶೇಖರ್ ಮೂರ್ತಿ, ಹನೂರು ನಾಗೇಂದ್ರ ವಿಜಯ್ ಲೋಕೇಶ್, ಸಿಂಗನಲ್ಲೂರು ರಾಜಣ್ಣ, ಚಂಗವಾಡಿ ರಾಜಣ್ಣ , ನಟರಾಜು ದತ್ತಾತ್ರೆಪಂಚಾಕ್ಷರಿ ಶಿವರಾಮೇಗೌಡ ಮಂಜೇಶ್ ಹಾಗೂ ಇನ್ನಿತರರಿದ್ದರು.







