ಹನೂರು: ಅರಣ್ಯ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ

ಹನೂರು,ಜೂ.9: ಬುಡಕಟ್ಟು ಜನರು ಮದ್ಯವರ್ತಿಗಳ ಕೈಗೊಂಬೆಯಾಗಿ ಕ್ಷಣಿಕ ಆಸೆಗಾಗಿ ಅರಣ್ಯ ಅಪರಾಧಗಳಲ್ಲಿ ತೊಡಗಿಕೊಂಡು ಪ್ರಕೃತಿ ಮಾತೆಗೆ ದ್ರೋಹ ಬಗೆಯುವಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಈ ದೊಡ್ಡಯ್ಯ ವಿಷಾದ ವ್ಯಕ್ತಪಡಿಸಿದರು.
ಮಲೆಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ಅರಣ್ಯ ವಲಯದ ಸೂಳೆಕೋಬೆ ಬುಡಕಟ್ಟು ಹಾಡಿಯಲ್ಲಿ ಸೋಲಿಗ ಅಭಿವೃದ್ಧಿ ಸಂಘ ಮತ್ತು ನೇಚರ್‍ಕನ್ ಸರ್ವೇಷನ್ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಅರಣ್ಯ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುಡಕಟ್ಟು ಸಮುದಾಯದವರಿಗೆ ಸರ್ಕಾರ ನೀಡುವ ವಿವಿಧ ಸೌಕರ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕುಡಿತ, ಜೂಜು ಮತ್ತು ಅರಣ್ಯ ಕಳ್ಳತನದಂತಹ ಅಪರಾಧ ಕೃತ್ಯಗಳಲ್ಲಿ ಕೈಜೋಡಿಸದೆ ಎಚ್ಚರಿಕೆ ವಹಿಸಬೇಕೆಂದರು.
ಬುಡಕಟ್ಟು ಜನರ ಜೀವನ ವಿಧಾನದಲ್ಲೇ ಸಂರಕ್ಷಣಾ ಮನೋಭಾವ ಇದೆ. ಪ್ರಕೃತಿಯೇ ನಮ್ಮ ಸಂಸ್ಕರತಿಯಾಗಿದೆ. ಇಂತಹ ವಿಶಿಷ್ಟ ಪದ್ದತಿಯನ್ನು ನಶಿಸುವಂತೆ ಮಾಡಬಾರದು ಎಂದು ಕಿವಿಮಾತು ಹೇಳಿದರು. ಮರ-ಗಿಡ-ವನ್ಯ ಪ್ರಾಣಿಗಳನ್ನು ಸೋದರ ನೆಂಟರಂತೆ ಭಾವಿಸಿ ಪೋಷಿಸಿ ರಕ್ಷಿಸುವುದರ ಮೂಲಕ ಅರಣ್ಯ ಸಂರಕ್ಷಣೆಗೆ ಕೈ ಜೋಡಿಸಬೇಕೆಂದು ಅವರು ಕರೆ ನೀಡಿದರು.
ಪಿಂಚಣಿ ನೀಡಲು ಆಗ್ರಹ: ಕಳೆದ 6 ತಿಂಗಳಿನಿಂದ ಈ ಭಾಗದ ಬುಡಕಟ್ಟುಜನರಿಗೆ ಸರ್ಕಾರದಿಂದ ನೀಡಲಾಗುವ ನಿರ್ಗತಿಕ ವೃದ್ಧಾಪ್ಯ, ವಿಧವೆ, ವಿಕಲಚೇತನ ಪಿಂಚಣಿ ನೀಡದ ಕಾರಣ ಫಲಾನುಭವಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ತಮಗೆ ಪಿಂಚಣಿ ದೊರೆತಿಲ್ಲ ಎಂದು ಸಭೆಯಲ್ಲಿ ದೂರಿದರು. ಸೂಳೆಕೋಬೆಯ 18 ಮಂದಿ ಕಳೆದ ಫೆಬ್ರವರಿಯಿಂದ ಇದುವರೆಗೂ ಪಿಂಚಣಿ ಸೌಲಭ್ಯ ದೊರೆತಿಲ್ಲ ಎಂದು ಅಳಲನ್ನು ತೋಡಿಕೊಂಡರು.
ಗ್ರಾಮದಲ್ಲಿ ನೀರುಗಂಟಿ ಕೆಲಸ ನಿರ್ವಹಿಸುತ್ತಿರುವ ಸೋಲಿಗನೊಬ್ಬನನ್ನು ಎಂದಿನಂತೆ ನೌಕರಿಯಲ್ಲಿ ಮುಂದುವರಿಸಿ ವೇತನ ನೀಡಬೇಕು ಎಂದು ಗ್ರಾಮ ಪಂಚಾಯತ್ ಗೆ ಆಗ್ರಹಿಸಲಾಯಿತು. ವಾಸದ ಮನೆಗಳಿಲ್ಲದೆ ಸಂಕಷ್ಟ ಎದುರಿಸುತ್ತಿರುವ 25 ಮಂದಿಗೆ ತಕ್ಷಣ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ಯೋಜನೆಯಡಿ ವಾಸದ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಸರ್ಕಾರವನ್ನುಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.
ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸಿದ್ದಮ್ಮ, ಸೂಳೆಕೋಬೆ ಗ್ರಾಪಂ ಸದಸ್ಯೆ ಚಿನ್ನಯ್ಯ, ರಂಗೇಗೌಡ, ಕಾರ್ಯದರ್ಶಿ ಗಣೇಶ ಮಹದೇವಸ್ವಾಮಿ, ವಿವಿಧ ಗ್ರಾಮಗಳಿಂದ ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.







