ಪ್ಲಾಸ್ಟಿಕ್ ಬಳಕೆಯ ವಿರುದ್ಧ ಹೋರಾಟದಲ್ಲಿ ಭಾರತದಿಂದ ಜಾಗತಿಕ ನಾಯಕತ್ವ ಪ್ರದರ್ಶನ: ವಿಶ್ವಸಂಸ್ಥೆ

ಹೊಸದಿಲ್ಲಿ, ಜೂನ್9: ಭಾರತದಲ್ಲಿ ಆಚರಿಸಿದ ವಿಶ್ವ ಪರಿಸರ ದಿನಾಚರಣೆಯನ್ನು ಐತಿಹಾಸಿಕ ಎಂದು ವ್ಯಾಖ್ಯಾನಿಸಿರುವ ವಿಶ್ವಸಂಸ್ಥೆಯ ಪರಿಸರ ಮುಖ್ಯಸ್ಥ ಎರಿಕ್ ಸೊಲ್ಹೇಮ್, 2022ರ ಒಳಗೆ ಒಂದು ಬಾರಿ ಉಪಯೋಗಿಸುವಂತ ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಘೋಷಣೆ ಮಾಡುವ ಮೂಲಕ ಭಾರತವು ಪ್ಲಾಸ್ಟಿಕ್ ವಿರುದ್ಧದ ಹೋರಾಟದಲ್ಲಿ ಜಾಗತಿಕ ನಾಯಕತ್ವವನ್ನು ಪ್ರದರ್ಶಿಸಿದೆ ಎಂದು ತಿಳಿಸಿದ್ದಾರೆ.
ಜೂನ್ ಐದರಂದು ಹೊಸದಿಲ್ಲಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಉಪಸ್ಥಿತಿಯಲ್ಲಿ ಪರಿಸರ ಸಚಿವ ಹರ್ಷವರ್ಧನ್, 2022ರ ಒಳಗೆ ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಣೆ ಮಾಡಿದ್ದರು. ವಿಶ್ವ ಪರಿಸರ ದಿನವು ನಿಜವಾಗಿಯೂ ಐತಿಹಾಸಿಕವಾಗಿತ್ತು. ಜಾಗತಿಕ ಆತಿಥ್ಯವಹಿಸಿದ್ದ ಭಾರತವು ದೇಶಾದ್ಯಂತ ಬೀಚ್ ಮತ್ತು ನದಿಗಳ ಸ್ವಚ್ಛತೆ ಸೇರಿದಂತೆ ಯುವಜನರಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅತ್ಯುತ್ತಮ ಕೆಲಸವನ್ನು ಮಾಡಿದೆ ಎಂದು ಸೊಲ್ಹೆಮ್ ತಿಳಿಸಿದ್ದಾರೆ.
ಭಾರತವು ಒಂದು ಅಭೂತಪೂರ್ವ ಘೋಷಣೆಯನ್ನು ಮಾಡಿದ್ದು ಇದರಿಂದ ಪ್ಲಾಸ್ಟಿಕ್ ವಿರುದ್ಧದ ಜಾಗತಿಕ ಹೋರಾಟದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀಳಲಿದೆ ಎಂದು ಅವರು ತಿಳಿಸಿದ್ದಾರೆ. ಅನುಷ್ಠಾನಗೊಳಿಸುವುದು ಕಷ್ಟ ಎಂಬುದು ನನಗೆ ತಿಳಿದಿದೆ. ಆದರೆ ಭಾರತವು ಈ ವಿಷಯದಲ್ಲಿ ಯಶಸ್ವಿಯಾಗುತ್ತದೆ ಎಂದು ನಂಬಿಕೆ ನನಗಿದೆ ಮತ್ತು ಜಾಗತಿಕವಾಗಿ ದೊಡ್ಡ ಪರಿಣಾಮ ಬೀರಲಿದೆ ಎಂದು ನಾನು ನಂಬುತ್ತೇನೆ ಎಂದು ಎರಿಕ್ ತಿಳಿಸಿದ್ದಾರೆ.





