ಉಡುಪಿ: ಸಾಧಾರಣ ಮಳೆ; ಅಲ್ಲಲ್ಲಿ ಹಾನಿ
ಉಡುಪಿ, ಜೂ.9: ಎರಡು ದಿನಗಳ ಕಾಲ ಜೋರಾಗಿ ಸುರಿದ ಮುಂಗಾರು ಮಳೆ ಇಂದು ತನ್ನ ಬಿರುಸನ್ನು ಕಳೆದುಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 72 ಮಿ.ಮೀ. ಮಳೆಯಾಗಿದ್ದು, ಉಡುಪಿಯಲ್ಲಿ 62.6ಮಿ.ಮೀ., ಕುಂದಾಪುರದಲ್ಲಿ 87.1ಮಿ.ಮೀ. ಹಾಗೂ ಕಾರ್ಕಳದಲ್ಲಿ 66.3ಮಿ.ಮೀ ಮಳೆಯಾಗಿದೆ.
ಸತತ ಮಳೆ ಹಾಗೂ ಆಗಾಗ ಬೀಸುತ್ತಿರುವ ಗಾಳಿಯಿಂದಾಗಿ ಅಲ್ಲಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದು, ಹೆಚ್ಚಿನ ಕಡೆಗಳಲ್ಲಿ ಮನೆಗಳ ಮೇಲೆ ಮರಗಳು ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಬಗ್ಗೆ ವರದಿಗಳು ಬಂದಿವೆ.
ಉದ್ಯಾವರದ ಪಡುಕೆರೆಯಲ್ಲಿ ಇಂದು ಬೆಳಗ್ಗೆ 9ಗಂಟೆ ಸುಮಾರಿಗೆ ಸುಂದರಿ ಎಂಬವರ ಪಕ್ಕಾ ಮನೆ ಮೇಲೆ ತೆಂಗಿನ ಮರ ಬಿದ್ದು 20,000ರೂ.ನಷ್ಟ ಸಂಭವಿಸಿದೆ. ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಆವರಣ ಗೋಡೆ ನಿನ್ನೆಯ ಮಳೆಗೆ ಕುಸಿದಿದ್ದು 30,000ರೂ.ನಷ್ಟು ಹಾನಿ ಸಂಭವಿಸಿದೆ.
ಕಾಪು ತಾಲೂಕಿನ ಅಲ್ಲಲ್ಲಿ ಗುರುವಾರ, ಶುಕ್ರವಾರದ ಮಳೆ-ಗಾಳಿಗೆ ಸಾಕಷ್ಟು ಹಾನಿ ಸಂಭವಿಸಿದ ಬಗ್ಗೆ ಇಲ್ಲಿಗೆ ವರದಿಗಳು ಬಂದಿವೆ. ಹೆಜಮಾಡಿ ಗ್ರಾಮದ ರಮೇಶ್ ಎಂಬವರ ವಾಸ್ತವ್ಯದ ಪಕ್ಕಾ ಮನೆ ಮೇಲೆ ಮರ ಬಿದ್ದು 60,000 ರೂ., ತೆಂಕ ಗ್ರಾಮದ ಸುಂದರಿ ಮುಲ್ಲಿ ಎಂಬವರ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದು 47,000ರೂ., ಅದೇ ಗ್ರಾಮದ ಸರಸು ಎಂಬವರ ಮನೆ ಶೌಚಾಲಯದ ಮೇಲೆ ಮರ ಬಿದ್ದು 15,000ರೂ.ನಷ್ಟದ ಅಂದಾಜು ಮಾಡಲಾಗಿದೆ.
ಬೆಳ್ಳೆ ಗ್ರಾಮದ ಪ್ರಭಾ ಎಂಬವರ ವಾಸ್ತವದ ಪಕ್ಕಾ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು 25,000ರೂ., ನಂದಿಕೂರು ಗ್ರಾಮದ ಭವಾನಿ ಮುರಾರಿ ಅವರ ವಾಸ್ತವ್ಯದ ಪಕ್ಕಾ ಮನೆಯ ಹಟ್ಟಿ ಮೇಲೆ ಗೇರುಮರ ಬಿದ್ದು 25,000ರೂ., ಪಲಿಮಾರು ಗ್ರಾಮದ ದುಗ್ಗಪ್ಪ ಆಚಾರ್ಯರ ಮನೆ ಮೇಲೆ ಮರ ಬಿದ್ದು 10,000ರೂ., ನಡ್ಸಾಲು ಗ್ರಾಮದ ಸುಂದರಿ ಆಚಾರ್ತಿ ಅವರ ವಾಸ್ತವ್ಯದ ಪಕ್ಕಾ ಮನೆ ಮೇಲೆ ಮರ ಬಿದ್ದು 40,000ರೂ. ಹಾಗೂ ಬೆಳಪು ಗ್ರಾಪಂ ವಾಣಿಜ್ಯ ಕಟ್ಟಡದ ಮೇಲೆ ಮರ ಬಿದ್ದು 15,000ರೂ. ನಷ್ಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.







