ಕ್ಯುಎಸ್ ವಿಶ್ವ ರ್ಯಾಂಕಿಂಗ್: ಮಾಹೆ ದೇಶದ ಖಾಸಗಿ ವಿವಿಗಳಲ್ಲಿ ನಂ.1
ಮಣಿಪಾಲ, ಜೂ.9: 2019ನೇ ಸಾಲಿನ ಕ್ಯುಎಸ್ ವಿಶ್ವ ವಿವಿಗಳ ರ್ಯಾಂಕಿಂಗ್‌ನಲ್ಲಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಭಾರತದ ಖಾಸಗಿ ವಿವಿಗಳಲ್ಲಿ ನಂ.1 ಸ್ಥಾನ ಪಡೆದಿದೆ ಎಂದು ಮಾಹೆ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಾರಿ ವಿಶ್ವದ 151 ದೇಶಗಳ 4,763 ವಿವಿಗಳನ್ನು ಕ್ಯುಎಸ್ ವಿಶ್ವ ವಿವಿ ರ್ಯಾಂಕಿಂಗ್‌ಗೆ ಪರಿಗಣಿಸಲಾಗಿತ್ತು. ದಾಖಲೆಪತ್ರ, ಡಾಟಾ ಹಾಗೂ ಸಾಧನೆಗಳ ಪರಿಶೀಲನೆ ಬಳಿಕ 1230 ವಿವಿಗಳನ್ನು ಅಂತಿಮ ಆಯ್ಕೆಗೆ ಪರಿಗಣಿಸಲಾಗಿತ್ತು. ಈ ಬಾರಿ ವಿಶ್ವದ 1000 ಅಗ್ರಗಣ್ಯ ವಿವಿಗಳ ಪಟ್ಟಿಯಲ್ಲಿ 85 ದೇಶಗಳ 60 ಹೊಸ ವಿವಿಗಳು ಸ್ಥಾನವನ್ನು ಪಡೆದುಕೊಂಡಿವೆ. ಭಾರತದಿಂದ ಒಟ್ಟು ಐದು ಹೊಸ ಸಂಸ್ಥೆಗಳು ಈ ಪಟ್ಟಿಯಲ್ಲಿವೆ.
ಮಾಹೆ ಈ ಬಾರಿಯ ಪಟ್ಟಿಯಲ್ಲಿ ಒಟ್ಟಾರೆಯಾಗಿ 751ರಿಂದ 800ರೊ ಳಗಿನ ಸ್ಥಾನವನ್ನು ಪಡೆದಿದ್ದರೂ, ಭಾರತದ ಖಾಸಗಿ ವಿವಿಗಳಲ್ಲಿ ನಂ.1 ಸ್ಥಾನ ದಲ್ಲಿದೆ. ಮಾಹೆ ಸಂಶೋಧನಾ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದಿದ್ದರೆ, ಪ್ರಾಧ್ಯಾಪಕರು-ವಿದ್ಯಾರ್ಥಿಗಳ ಅನುಪಾತದಲ್ಲಿ ಉತ್ತಮ ಸ್ಥಾನ ಪಡೆದಿದೆ ಎಂದು ಕ್ಯುಎಸ್ ಸಮೀಕ್ಷೆ ಹೇಳಿದೆ.





