ಸಿಬಿಐ, ಎಸಿಬಿ ನನ್ನನ್ನು ಗುರಿಯಾಗಿಸುತ್ತಿದೆ: ಕೇಜ್ರಿವಾಲ್ ಆರೋಪ

ಹೊಸದಿಲ್ಲಿ, ಜೂನ್ 9: ನನ್ನನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದ ಸಿಬಿಐ ಮತ್ತು ಭ್ರಷ್ಟಾಚಾರನಿಗ್ರಹ ಪಡೆ (ಎಸಿಬಿ) ನಾನು ಉಸ್ತುವಾರಿ ಸಚಿವನಾಗಿರುವ ದಿಲ್ಲಿ ಜಲ ಮಂಡಳಿಯ ದಾಖಲೆಗಳನ್ನು ಪರಿಶೀಲಿಸುವ ಕೆಲಸವನ್ನು ಮಾಡುತ್ತಿವೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕೇಜ್ರಿವಾಲ್, ಸಿಬಿಐ ಮತ್ತು ಎಸಿಬಿ ಕೇಳಿರುವ ದಾಖಲೆಗಳ ಪಟ್ಟಿಯನ್ನು ಸಾರ್ವಜನಿಕ ಜಾಲತಾಣಗಳಲ್ಲಿ ಹಾಕಲಿದ್ದು, ಈ ದಾಖಲೆಗಳನ್ನು ಕೇಳಲು ಒಂದೋ ಕಾರಣವನ್ನು ವಿವರಿಸಬೇಕು ಅಥವಾ ಈ ರೀತಿ ಷಡ್ಯಂತ್ರ ರೂಪಿಸಿರುವುದಕ್ಕಾಗಿ ದಿಲ್ಲಿವಾಸಿಗಳ ಕ್ಷಮೆಯನ್ನು ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ, ಲೆಫ್ಟಿನೆಂಟ್ ಗವರ್ನರ್ ಮತ್ತು ಬಿಜೆಪಿಯವರೇ ನಿಮ್ಮ ಬಳಿ ನಿಖರವಾದ ಮಾಹಿತಿಯಿದ್ದರೆ ದಯಮಾಡಿ ತನಿಖೆ ನಡೆಸಿ. ಈ ರೀತಿ ದಿಲ್ಲಿ ಸರಕಾರದ ಎಲ್ಲ ಇಲಾಖೆಗಳನ್ನು ಕಾರ್ಯನಿರ್ವಹಿಸದಂತೆ ಮಾಡುವ ಮೂಲಕ ರಾಜ್ಯದ ಜನರಿಗೆ ತೊಂದರೆ ನೀಡಬೇಡಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಈ ಕುರಿತು ಸಮಾಲೋಚನೆ ನಡೆಸಲು ಸೋಮವಾರದಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್‌ರನ್ನು ಭೇಟಿ ಮಾಡಲು ಸಮಯಾವಕಾಶವನ್ನು ಕೇಳಿದ್ದೇನೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.







