ಜೂ.15ರಿಂದ 8ನೇ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ
ಮುದ್ರಾಡಿ ನಾಟ್ಕದೂರಿನಲ್ಲಿ ಮಳೆಗಾಲದ ರಸದೌತಣ
ಹೆಬ್ರಿ, ಜೂ.9: ಮುದ್ರಾಡಿ ನಾಟ್ಕದೂರಿನ ‘ನಮತುಳುವೆರ್ ಕಲಾ ಸಂಘಟನೆ’ ಈ ಮಳೆಗಾಲದಲ್ಲಿ ಜಿಲ್ಲೆಯ ರಂಗಪ್ರಿಯರಿಗೆ ವೈವಿಧ್ಯಮಯ ಕಲಾ ರಸದೌತಣ ನೀಡಲು ಮುಂದಾಗಿದ್ದು, ನಾಟ್ಕದೂರು ಚೌಟರ ಬಯಲಿನಲ್ಲಿ ಜೂ.15ರಿಂದ 22ರವರೆಗೆ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-8ನ್ನು ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನಟ, ರಂಗ ನಿರ್ದೇಶಕ ಸುಕುಮಾರ್ ಮೋಹನ್ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ರಂಗೋತ್ಸವದ ಪ್ರಥಮ ದಿನ ಜೂ.15ರಂದು ಮಂಜುನಾಥ ಎಲ್. ಬಡಿಗೇರ್ ನಿರ್ದೇಶನದ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ಯಿಂದ ಹಳೆಗನ್ನಡ ನಾಟಕ ‘ದಶಾನನ ಸ್ವಪ್ನಸಿದ್ಧಿ’ ನಾಟಕ, 16ರಂದು ಮುಂಬಯಿ ಕಲಾ ಜಗತ್ತು ಕ್ರಿಯೇಶನ್ಸ್ ತಂಡದಿಂದ ತೋನ್ಸೆ ವಿಜಯ ಕುಮಾರ್ ಶೆಟ್ಟಿ ನಿರ್ದೇಶನದ ‘ಪಗರಿದ ಮಂಚವು’ ತುಳು ನಾಟಕ ನಡೆಯಲಿದೆ.
ಜೂ. 17ರಂದು ಮುನ್ನೂರೊಕ್ಲು ಕಲಾಮಾಯೆ ತಂಡದ ಸುಧೀರ್ ಏನೆಕಲ್ ನಿರ್ದೇಶನದಲ್ಲಿ ‘ಒಂದಾನೊಂದು ಕಾಲಲಿ’ ಅರೆಭಾಷೆ ನಾಟಕ ಪ್ರದರ್ಶನ ಗೊಳ್ಳಲಿದೆ. 18ರಂದು ಕೆಳಮನೆ ಹೆಗ್ಗೋಡು ಸಾಕೇತ ಕಲಾವಿದರು ತಂಡದಿಂದ ಹೊಸತೋಟ ಮಂಜುನಾಥ ಶೆಟ್ಟಿ ನಿರ್ದೇಶನದ ಕನ್ನಡ ಯಕ್ಷಗಾನ ‘ರಾಮ ನಿರ್ಯಾಣ’, 19ರಂದು ಸತೀಶ್ ಆಲೇಕರ್ ರಚಿಸಿದ ಮಾನಿಕ್ ಶಿಂಧೆ ನಿರ್ದೇಶನದ ಮೀಠಿಚಾರ್ ಕಲ್ಯಾನ್ ತಂಡದಿಂದ ‘ಶನಿವಾರ್ ರವಿವಾರ್’ ಮರಾಠಿ ನಾಟಕ ಪ್ರದರ್ಶನಗೊಳ್ಳಲಿದೆ.
ಜೂ.20ರಂದು ಇರ್ಫಾನ್ ಮುಜಾವರ್ ರಚನೆಯ ಅಭಿಜಿತ್ ಜುನ್‌ಜಾರೋ ನಿರ್ದೇಶನದ ಮುಂಬಯಿ ಅಭಿನಯ್ ಕಲ್ಯಾಣ್ ತಂಡದಿಂದ ಹಿಂದಿ ನಾಟಕ ‘ದರ್ದಪುರ’, 21ರಂದು ಪಿ.ಲಂಕೇಶ್ ರಚಿಸಿದ ಕ್ಲ್ಯಾನ್ವಿಸ್ ಫೆರ್ನಾಂಡಿಸ್ ನಿರ್ದೇಶನದಲ್ಲಿ ಮಂಗಳೂರಿನ ಅಸ್ವಿತ್ವ ತಂಡದಿಂದ ಕೊಂಕಣಿ ನಾಟಕ ‘ಹೋಂ ಸ್ವೀಟ್ ಹೋಂ’, 22ರಂದು ರಾಜ್ಯದ ವಿವಿಧ ಜನಪದ ಕಲಾ ತಂಡಗಳಿಂದ ಮುದ್ರಾಡಿ ಪೇಟೆಯಿಂದ ನಾಟ್ಕದೂರಿನವರೆಗೆ ಜನಪದ ಉತ್ಸವ ನಡೆದು ಸಂಜೆ ಕಾಪು ರಂಗತರಂಗ ತಂಡದಿಂದ ‘ಪೊಪ್ಪ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ನಾಗೇಂದ್ರ ಶಾರಿಂದ ಚಾಲನೆ: ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-8ಕ್ಕೆ ರಂಗ ನಿರ್ದೇಶಕ ವಿ.ನಾಗೇಂದ್ರ ಶಾ ಚಾಲನೆ ನೀಡುವರು. ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸುವರು. ನಾಟ್ಕ ಮುದ್ರಾಡಿ ಸಂಸ್ಥಾಪಕ ಮುದ್ರಾಡಿ ಆದಿಶಕ್ತಿ ಮತ್ತು ನಂದೀಕೇಶ್ವರ ದೇವಸ್ಥಾನದ ಧರ್ಮದರ್ಶಿ ಧರ್ಮಯೋಗಿ ಮೋಹನ ಸ್ವಾಮೀಜಿ ಆರ್ಶೀಚಚನ ನೀಡುವರು.
ಇದೇ ಸಂದರ್ಭದಲ್ಲಿ ರಂಗನಟ ತುಳುವ ಮಾಣಿಕ್ಯ ಅರವಿಂದ ಬೋಳಾರ್ ಅವರಿಗೆ ರಂಗಾಭಿನಂದನೆ ನಡೆಯಲಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ನಿರ್ದೇಶಕ ದೇವದಾಸ ಪೈ, ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಅದಾನಿ ಯುಪಿಸಿಎಲ್‌ನ ಜಂಟಿ ನಿರ್ದೇಶಕ ಕಿಶೋರ್ ಆಳ್ವ, ಅಧ್ಯಪಾಡಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಮಂಜುನಾಥ ಭಂಡಾರಿ, ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು, ಉಡುಪಿ ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಕೆರೆಮನೆ ಶಿವಾನಂದ ಹೆಗ್ಡೆ, ರಂಗನಿರ್ದೇಶಕ ತೋನ್ಸೆ ವಿಜಯ ಕುಮಾರ್ ಉಪಸ್ಥಿತರಿರುವರು.







