ಸ್ವಾರ್ಥಕ್ಕಾಗಿ ಅಂಬೇಡ್ಕರ್ ರನ್ನು ದಾಳವಾಗಿ ಬಳಸುತ್ತಿರುವ ಸಂಘಟನೆಗಳು: ಪ್ರೊ. ರಾಜೇಂದ್ರ ಚೆನ್ನಿ

ತುಮಕೂರು,ಜೂ.09: ಆಳದಲ್ಲಿ ಅಂಬೇಡ್ಕರ್ ಮತ್ತು ಅವರ ಸಿದ್ದಾಂತವನ್ನು ಒಪ್ಪುವ ಜನರ ವಿರುದ್ಧ ದ್ವೇಷ ಕಾರುವ ಕೆಲವು ಸಂಘಟನೆಗಳು, ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಾಬಾ ಸಾಹೇಬರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದು, ಈ ಬಗ್ಗೆ ವಿದ್ಯಾವಂತ ಯುವಜನತೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಬಿ.ಕೃಷ್ಣಪ್ಪ ಪ್ರತಿಷ್ಠಾನ(ರಿ),ಕರ್ನಾಟಕ, ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸರಕಾರಿ ನೌಕರರ ಸಮನ್ವಯ ಸಮಿತಿ, ತುಮಕೂರು ಇವರ ಸಹಕಾರದಲ್ಲಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪ ಅವರ 80ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಪ್ರೊ.ಬಿ.ಕೃಷ್ಣಪ್ಪ ಅವರು ಕರ್ನಾಟಕದಲ್ಲಿ ಹೊಸ ಪ್ರಜ್ಞೆಯೊಂದನ್ನು ಹುಟ್ಟು ಹಾಕಲು ದಸಂಸವನ್ನು ಸ್ಥಾಪಿಸಿದರು. ಅದರಲ್ಲಿ ಯಶಸ್ವಿಯೂ ಆದರು. ಅವರೇ ಹೇಳಿಕೊಂಡಂತೆ ಪ್ರತಿಯೊಂದು ಗುಡಿಸಿಲುಗಳಲ್ಲಿಯೂ ಹೋರಾಟದ ಹಣತೆಯನ್ನು ಹಚ್ಚಿದವರು ಪ್ರೊ.ಬಿ.ಕೆ . ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತವನ್ನು ದಸಂಸ ಹೋರಾಟದ ಮೂಲಕ ಜಾರಿಗೆ ತಂದವರು. ಕರ್ನಾಟಕಕ್ಕೆ ಹೊಸ ಹೋರಾಟದ ದಾರಿಯನ್ನು ಕಟ್ಟಿಕೊಟ್ಟವರ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಯಾವುದೇ ಸಾಹಿತ್ಯ, ಚರ್ಚೆಗಳು ನಡೆಯುತ್ತಿಲ್ಲ. ಇಂದಿನ ಯುವಜನತೆಗೆ ಪ್ರೊ.ಬಿ.ಕೆ.ಅವರನ್ನು ಪರಿಚಯಿಸುವ ಮೂಲಕ ಸ್ಪೂರ್ತಿ ತುಂಬಬೇಕಾಗಿದೆ ಎಂದು ಪ್ರೊ.ರಾಜೇಂದ್ರ ಚೆನ್ನಿ ನುಡಿದರು.
ಪ್ರೊ.ಬಿ.ಕೆ.ಅವರಿಗೆ ಯಾವುದನ್ನು ವಿರೋಧಿಸಬೇಕು, ಅದಕ್ಕೆ ಪೂರ್ವ ಸಿದ್ದತೆಗಳೇನು ಎಂಬುದನ್ನು ಚೆನ್ನಾಗಿ ಅರಿತಿದ್ದರೂ, ಅವರ ದೂರದೃಷ್ಟಿಯ ಫಲವಾಗಿಯೇ ಅತ್ಯಂತ ಅನಿಷ್ಠ ಪದ್ದತಿಯಾದ ಚಂದ್ರಗುತ್ತಿಯ ಬೆತ್ತಲೆ ಸೇವೆಯನ್ನು ಅನೇಕರ ವಿರೋಧದ ನಡುವೆಯೂ ಸಮರ್ಥವಾಗಿ ತಡೆಯಲು ಸಾಧ್ಯವಾಯಿತು. ಮಠಗಳ ಅನ್ಯಾಯದ ವಿರುದ್ದ, ಜಾತಿ ವಿನಾಶ, ಅಂತರ್ ಜಾತಿ ವಿವಾಹಿತರಿಗೆ ಪ್ರೋತ್ಸಾಹ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಯಶಸ್ವಿಯಾಗಿದ್ದರು. ಶೋಷಿತರನ್ನು ಹೋರಾಟದ ಹೆಸರಿನಲ್ಲಿ ಒಂದುಗೂಡಿಸುವ ಮಹತ್ತರ ಕೆಲಸವನ್ನು ಪ್ರೊ.ಬಿ.ಕೆ.ಮಾಡಿದ್ದರು. ಆದರೆ ಇಂದು ಮಡೆಸ್ನಾನ ದಂತಹ ಅನಿಷ್ಠ ಪದ್ದತಿಗಳನ್ನು ತಡೆಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಹೋರಾಟಗಾರರು ಆತ್ಮವಿಮರ್ಶೆ ಮಾಡಿಕೊಳ್ಳ ಬೇಕಾಗಿದೆ ಎಂದರು.
ರಾಜ್ಯ ಎಸ್ಸಿ,ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಮಾತನಾಡಿ, ಜಾಗತೀಕರಣ, ಉದಾರೀಕರಣದ ಫಲವಾಗಿ ಇಂದು ದಲಿತರ ಅಸ್ಮಿತೆಗಾಗಿ ಹೋರಾಟ ನಡೆಸಿದ ಅಂಬೇಡ್ಕರ್ ಮತ್ತು ಪ್ರೊ.ಬಿ.ಕೆ ಅವರನ್ನು ಯುವಜನತೆಗೆ ಪರಿಚಯಿಸುವ ಅಗತ್ಯ ಬಂದೊದಗಿದೆ. ಒಂದು ಸಂತೋಷದ ಸಂಗತಿ ಎಂದರೆ ಅಂಬೇಡ್ಕರ್, ಬುದ್ದ, ಬಸವಣ್ಣನವರ ದ್ವನಿಯಾಗಿ ಎನ್.ಮಹೇಶ್ ವಿಧಾನಸಭೆ ಪ್ರವೇಶಿಸಿರುವುದು. ಆದರೆ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗದು ಎಂಬ ಸತ್ಯವನ್ನು ಅರಿಯಬೇಕಾಗಿದೆ. ಹೋರಾಟಗಾರರಲ್ಲಿ ಸ್ಪೂರ್ತಿಯ ಕೊರತೆ ಕಾಣುತ್ತಿದ್ದು, ಪ್ರೊ.ಬಿ.ಕೆ. ಅವರ ಜಾತಿಬಿಟ್ಟು ದೇಶಕಟ್ಟು ಎನ್ನವು ತತ್ವಕ್ಕೆ ಬದಲಾಗಿದೆ. ದೇಶ ಬಿಟ್ಟು ಜಾತಿ ಕಟ್ಟುವ ಕೆಲಸ ನಡೆಯುತ್ತಿದೆ. ಇದಕ್ಕೆ ಪರಿಹಾರವೆಂದರೆ ಅಂಬೇಡ್ಕರ್, ಲೋಹಿಯಾ ಚಿಂತನೆಗಳ ಅನುಸಂಧಾನ. ಈ ನಿಟ್ಟಿನಲ್ಲಿ ದಲಿತರು ಆಡಳಿತದ ಶಕ್ತಿಯಾಗಿ ರೂಪಗೊಳ್ಳಬೇಕಿದೆ. ಅಂಬೇಡ್ಕರ್, ಪ್ರೊ.ಬಿ.ಕೆ.ಅವರ ಚಿಂತನೆಗಳ ಬಗ್ಗೆ ಪ್ರಚಾರ ಮಾಡುವುದಕ್ಕಿಂತ ಅದನ್ನು ಆಚರಣೆಗೆ ತರಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೆ.ದೊರೈರಾಜು ಮಾತನಾಡಿ, ಹೋರಾಟಗಾರರು ನಮ್ಮ ಮುಂದಿರುವ ವರ್ತಮಾನದ ಸವಾಲುಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಸೋಲು ಕಾಣುವುದು ಖಚಿತ. ಈ ನಿಟ್ಟಿನಲ್ಲಿ ಪ್ರೊ.ಬಿ.ಕೆ.ಅವರ ಹೋರಾಟದ ಮಾದರಿಯನ್ನು ಅರಿತು ನಡೆಯಬೇಕಿದೆ. ಕೋಮುವಾದಿ, ಜಾತಿವಾದಿ, ಅಸಮಾನತೆಯಂತಹ ಸಂವಿಧಾನ ವಿರೋಧಿ ಚಟುವಟಿಕೆಗಳ ವಿರುದ್ದ ಪ್ರಜಾಪ್ರಭುತ್ವದ ನೆಲೆಯಲ್ಲಿಯೇ ಹೋರಾಟ ರೂಪಿಸಬೇಕಾಗಿದೆ. ಸಂತ್ರಸ್ತರಿಗೆ ಮೊದಲು ಅರಿವು ಮೂಡಿಸುವ ಮೂಲಕ ಅವರನ್ನು ಹೋರಾಟಕ್ಕೆ ಅಣಿಗೊಳಿಸಬೇಕಾಗಿದೆ. ಸನಾತನ ಗುಲಾಮಗಿರಿಗೆ ಬದಲಾಗಿ, ಸಮಾನತೆಯ ಬೌದ್ದಿಕ ಹೋರಾಟಕ್ಕೆ ಮುನ್ನುಡಿ ಬರೆಯಬೇಕಿದೆ ಎಂದರು.
ಕಾರ್ಯಕ್ರಮ ಕುರಿತು ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದಲಿತ ಹೋರಾಟಗಾರರಾದ ಕುಂದೂರು ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ, ರಾಜ್ಯ ಎಸ್ಸಿ, ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ.ಬಾಲಕೃಷ್ಣ, ಸಂಶೋಧನಾ ವಿದ್ಯಾರ್ಥಿ ಲಕ್ಷ್ಮಿರಂಗಯ್ಯ, ತುಮಕೂರು ವಿವಿ ಬುದ್ದ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







