ಪರಿಸರಕ್ಕೆ ಹಾನಿಯಾಗದ ರೀತಿ ಎತ್ತಿನಹೊಳೆ ಯೋಜನೆ ಜಾರಿ: ಅರಣ್ಯ ಸಚಿವ ಶಂಕರ್

ತುಮಕೂರು,ಜೂ.09: ಮಧ್ಯ ಕರ್ನಾಟಕದ 9 ಜಿಲ್ಲೆಗಳ 44 ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದ ರೀತಿ ಅನುಷ್ಟಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅರಣ್ಯ ಸಚಿವ ಶಂಕರ್ ತಿಳಿಸಿದ್ದಾರೆ.
ಸಚಿವರಾದ ನಂತರ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಆಗಮಿಸಿ, ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಬಗ್ಗೆ ಆ ಭಾಗದಲ್ಲಿ ಹೋರಾಟವಿದೆ. ಆದರೆ ಇದು ಕುಡಿಯುವ ನೀರಿನ ಯೋಜನೆಯಾಗಿರುವ ಕಾರಣ ಅರಣ್ಯಕ್ಕೆ ಹೆಚ್ಚಿನ ಹಾನಿಯಾಗದ ರೀತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ನೀರಾವರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಸರಕ್ಕೆ ಹಾನಿಯಾಗದ ರೀತಿ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ನುಡಿದರು.
ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜವಾದರೂ, ಇರುವ ಸಿಬ್ಬಂದಿಯೇ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆಯೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಎಲ್ಲೋ ಕುಳಿತು ಕಾಡು ಕಾಯುವ ನಾಟಕವಾಡುವ ಬದಲು, ಸಸ್ಯ ಸಂಕುಲದ ಜೊತೆಗೆ, ಪ್ರಾಣಿ ಸಂಕುಲವನ್ನು ಉಳಿಸಲು ಸಿಬ್ಬಂದಿಯನ್ನು ಸಿದ್ದಗೊಳಿಸಲಾಗುವುದು. ಅಲ್ಲದೆ ಈಗಾಗಲೇ ಸರಕಾರದ ಅನುಮತಿ ದೊರೆತಿರುವ 4-5 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎನ್.ಎಸ್.ಶಂಕರ್ ತಿಳಿಸಿದರು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಅವುಗಳ ಅನುಷ್ಠಾನದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಬಹಳ ಶ್ರದ್ಧಾಪೂರ್ವಕವಾಗಿ ನಿರ್ವಹಿಸಿ, ಸರಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದರು.
ಸಚಿವ ಸಂಪುಟದಲ್ಲಿ ಕುರುಬ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ ಎಂಬುದರಲ್ಲಿ ಹುರುಳಿಲ್ಲ. ಇರುವುದು 34 ಮಂತ್ರಿ ಸ್ಥಾನ ಮಾತ್ರ. ಮೊದಲಿಗೆ ಐದು ವರ್ಷ ಸುಭದ್ರ ಸರಕಾರ ನೀಡುವತ್ತ ನಾವೆಲ್ಲರೂ ಗಮನಹರಿಸಬೇಕಾಗಿದೆ. ಕಾಂಗ್ರೆಸ್ ಬಳಿ ಉಳಿದಿರುವ ಆರು ಸಚಿವ ಸ್ಥಾನಗಳಿಗೆ ಆರ್ಹರನ್ನು ಆಯ್ಕೆ ಮಾಡಿ, ಸಾಮಾಜಿಕ ನ್ಯಾಯ ಕಾಪಾಡಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.







