ದಾವಣಗೆರೆ: ಮೂವರು ಕಳ್ಳರ ಬಂಧನ; ಚಿನ್ನಾಭರಣ ವಶ

ದಾವಣಗೆರೆ,ಜೂ.09: ಹಗಲು ಹೊತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳವು ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಪೊಲೀಸರು 705 ಗ್ರಾಂ ಬಂಗಾರದ ಆಭರಣ, 680 ಗ್ರಾಂ ಬೆಳ್ಳಿಯ ಆಭರಣ ಹಾಗೂ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶಿವನಿ ಗ್ರಾಮದವರಾದ ಸ್ವಾಮಿ ನವೀನ್(26) ಸುರೇಶ್(35) ಮತ್ತು ಹೊನ್ನಾಳಿ ತಾಲೂಕು ದಾನಿಹಳ್ಳಿ ಗ್ರಾಮದ ನೀಲಾಚಾರಿ ಯಾನೆ ನೀಲ(39)ಬಂಧಿತ ಕಳ್ಳರು.
ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಲಕಟ್ಟೆಯಲ್ಲಿ ನಡೆದ ಮನೆ ಕಳವು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಈ ಮೂವರು ಕಳ್ಳರು ತನಿಖೆ ವೇಳೆಯಲ್ಲಿ ದಾವಣಗೆರೆ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.
ಇತ್ತೀಚೆಗೆ ಮಿಟ್ಲಕಟ್ಟೆಯಲ್ಲಿ ನಡೆದ ಹಗಲು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರನ್ನು ಹಿಡಿಯಲು ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಎಂ.ಕೆ.ಗಂಗಲ್ ಅವರ ನೇತೃತ್ವದಲ್ಲಿ ಹರಿಹರ ವೃತ್ತ ನಿರೀಕ್ಷಕ ಎಸ್.ಲಕ್ಷ್ಮಣನಾಯ್ಕ, ಗುರುರಾಜ್ ಮೈಲಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚನೆ ಮಾಡಿದ್ದು, ಕಳ್ಳರನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಹೇಳಿದರು.
ಇದರೊಂದಿಗೆ ದಾವಣಗೆರೆ ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಹದಡಿ ಪೊಲೀಸ್ ಠಾಣೆಯ 2 ಪ್ರಕರಣ, ಹೊನ್ನಾಳಿ ಪೊಲೀಸ್ ಠಾಣೆಯ 2 ಪ್ರಕರಣ, ನ್ಯಾಮತಿ ಪೊಲೀಸ್ ಠಾಣೆಯ 1 ಪ್ರಕರಣ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 1 ಪ್ರಕರಣವನ್ನು ಭೇದಿಸಿದ್ದು ಅಲ್ಲದೇ ಹೊರ ಜಿಲೆಯ ಶಿಕಾರಿಪುರ ಗ್ರಾಮೀಣ ಪೊಲೀಸ್ ಠಾಣೆಯ 01 ಪ್ರಕರಣ, ರಟ್ಟಿಹಳ್ಳಿ ಪೊಲೀಸ್ ಠಾಣೆಯ 01 ಪ್ರಕರಣ, ಹಲಗೇರಿ ಪೊಲೀಸ್ ಠಾಣೆಯ 1 ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು.
ಆರೋಪಿತರಿಂದ ಒಟ್ಟು 21.15 ಲಕ್ಷ ಮೌಲ್ಯದ 705 ಗ್ರಾಂ ಬಂಗಾರದ ಆಭರಣಗಳು, 23,800 ರೂ ಬೆಲೆಯ 680 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 60 ಸಾವಿರ ಬೆಲೆಯ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಒಟ್ಟು ವಿವಿಧ ಪೊಲೀಸ್ ಠಾಣೆಯ 12 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.
ಪಿ.ಎಸ್.ಐ. ಶ್ರೀಧರ್, ರಾಘವೇಂದ್ರ ಖಾಂಡಿಕೆ, ರಾಘವೇಂದ್ರ, ಮಜೀದ್, ರಮೇಶ್ ನಾಯ್ಕ್, ಶಾಂತರಾಜ್, ಸೈಯದ್ ಗಫಾರ್, ದ್ವಾರಕೀಶ್, ಇಲಿಯಾಜ್, ನಾಗರಾಜ್, ವೆಂಕಟೇಶ್, ಕೃಷ್ಣ, ತಾಂತ್ರಿಕ ವಿಭಾಗದ ರಾಮಚಂದ್ರ ಜಾದವ್ ಅವರಿಗೆ ಬಹುಮಾನ ಘೋಷಣೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.







