ಕೊಪ್ಪ: ಪತ್ನಿಯ ಸಹೋದರಿಯ ಅತ್ಯಾಚಾರ ಆರೋಪ; ತಾಪಂ ಇಒ ಬಂಧನ

ಚಿಕ್ಕಮಗಳೂರು, ಜೂ.9: ಅಕ್ಕನ ಮನೆಯಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಅಕ್ಕನ ಗಂಡ ತನ್ನನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ ಎಸಗಿದ್ದಲ್ಲದೇ, ತನ್ನನ್ನು ಕಾನೂನಿನಲ್ಲಿ ಮಾನ್ಯತೆ ಇಲ್ಲದ ರೀತಿಯಲ್ಲಿ ಎರಡನೇ ವಿವಾಹವಾಗಿದ್ದಾನೆ. ಇದಕ್ಕೆ ತನ್ನ ಅಕ್ಕ ಸಹಕಾರ ನೀಡಿದ್ದಾಳೆಂದು ಮಹಿಳೆಯಯೊಬ್ಬರು ನೀಡಿದ ದೂರಿನನ್ವಯ ಕೊಪ್ಪ ತಾಲೂಕು ಪಂಚಾಯತ್ ಇಒ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕೊಪ್ಪತಾಲೂಕು ಪಂಚಾಯತ್ ಇಒ ಜಯರಾಮ್ ಬಂಧನಕ್ಕೊಳಗಾದವರು.
ಆರೋಪಿ ಜಯರಾಮ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸಂತ್ರಸ್ತೆ ಆಕೆಯ ಅಕ್ಕ ಹಾಗೂ ಬಾವ ಜಯರಾಮನೊಂದಿಗೆ ಇದ್ದು, ಅಲ್ಲಿಂದಲೇ ಆಂದ್ರಪ್ರದೇಶದ ಗಡಿಯಲ್ಲಿರುವ ಮಡಕಶೀರ ಸರಕಾರಿ ಕಾಲೇಜಿಗೆ ಹೋಗಿ ಬರುತ್ತಿದ್ದಳು. ಈ ವೇಳೆ ಆರೋಪಿ ಜಯರಾಮ, ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ವಂಚಿಸಿ ನಿರಂತರ ಅತ್ಯಾಚಾರಗೈದಿದ್ದಾನೆ ಎಂದು ಸಂತ್ರಸ್ತೆ ಕೊಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪಿಯುಸಿ ಅನುತ್ತೀರ್ಣವಾದ ಬಳಿಕ ಸಂಸ್ರಸ್ತೆ ತನ್ನ ತಂದೆ-ತಾಯಿ ಮನೆಗೆ ಹೋಗಿದ್ದು, ಈ ವಿಷಯ ಮನೆಯವರಿಗೆ ತಿಳಿಸಿದ್ದರಿಂದ ಕುಟುಂಬದವರು ಜಯರಾಮ್ ಹಾಗೂ ಸಂತ್ರಸ್ತೆಗೆ ಧರ್ಮಸ್ಥಳದಲ್ಲಿ ಕಾನೂನಿನಲ್ಲಿ ಮಾನ್ಯತೆ ಇಲ್ಲದ ಗಂಧರ್ವ ವಿವಾಹ ಮಾಡಿಸಿದ್ದರು ಎಂದು ತಿಳಿದುಬಂದಿದೆ.
ನಂತರ ಪಾವಗಡದಿಂದ ಕೊಪ್ಪಕ್ಕೆ ವರ್ಗಗೊಂಡ ಜಯರಾಮ್ ಹಾಗೂ ಆತನ ಪತ್ನಿ ಕೊಪ್ಪ ಪಟ್ಟಣದಲ್ಲಿ ನೆಲೆಸಿದ್ದರು. ಇತ್ತೀಚೆಗೆ ತಾನು ತನ್ನ ಗಂಡ ಜಯರಾಮ್ ಮನೆಗೆ ಬಂದಾಗ ಅಕ್ಕ ತನ್ನನ್ನು ಮನೆಯೊಳಗೆ ಬಿಟ್ಟುಕೊಳ್ಳದೇ ಹಲ್ಲೆ ಮಾಡಿದ್ದಾರೆ. ತನ್ನ ಅಕ್ಕ ಹಾಗೂ ಭಾವನ ವಿರುದ್ಧ ಕ್ರಮ ವಹಿಸಬೇಕೆಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಕೊಪ್ಪ ಠಾಣೆಯ ಪೊಲೀಸರು ಜಯರಾಮ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಶನಿವಾರ ಬೆಳಗ್ಗೆ ಪಟ್ಟಣದ ಆತನ ಮನೆಯಿಂದಲೇ ವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಪ್ರಕರಣದ ಮತ್ತೋರ್ವ ಆರೋಪಿ, ಜಯರಾಮ್ ಪತ್ನಿ ತಲೆ ಮರೆಸಿಕೊಂಡಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆಂದು ಎಸ್ಪಿ ಕಚೇರಿಯ ಪ್ರಕಟನೆಯಲ್ಲಿ ತಿಳಿಸಿದೆ.







