ಮೈಸೂರು: ಸಚಿವ ಜಿ.ಟಿ.ದೇವೇಗೌಡರ ಖಾತೆ ಬದಲಾಯಿಸಲು ಒತ್ತಾಯಿಸಿ ಧರಣಿ

ಮೈಸೂರು,ಜೂ.9: ಉನ್ನತ ಶಿಕ್ಷಣ ಸಚಿವ ಸ್ಥಾನವನ್ನು ಜಿ.ಟಿ.ದೆವೇಗೌಡರಿಗೆ ನೀಡಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ವಿಜಯನಗರದ ಸಚಿವ ಜಿ.ಟಿ.ದೇವೇಗೌಡರ ಮನೆ ಬಳಿ ಶನಿವಾರ ಜಮಾಯಿಸಿದ ಕಾರ್ಯಕರ್ತರು ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಿ ಅನ್ಯಾಯ ಮಾಡಲಾಗಿದೆ. ಅವರ ಖಾತೆ ಬದಲಾಯಿಸಿ ಪ್ರಬಲ ಖಾತೆ ನೀಡಬೇಕು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಲು ಬಂದ ಜಿ.ಟಿ.ಡಿ. ಪುತ್ರ ಹರೀಶ್‍ಗೌಡರನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು ಕೊಟ್ಟರೆ ಪ್ರಬಲ ಖಾತೆ ಕೊಡಲಿ, ನೀವು ಮತ್ತು ನಿಮ್ಮ ತಂದೆ ಮೌನ ವಹಿಸುವುದು ಬೇಡ. ನೀವು ಮತ್ತು ಜಿ.ಟಿ.ಡಿ ಪಕ್ಷಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೀರಿ. ಹುಣಸೂರು ಕ್ಷೇತ್ರವನ್ನು ನೀವು ಬಿಟ್ಟುಕೊಟ್ಟಿದ್ದೀರಿ. ಇದ್ಯಾವುದು ವರಿಷ್ಟರಿಗೆ ಗೊತ್ತಿಲ್ಲವೆ? ಕೊಟ್ಟರೆ ಪ್ರಬಲ ಖಾತೆ ನೀಡಲಿ ಇಲ್ಲದಿದ್ದರೆ ರಾಜೀನಾಮೆ ಬಿಸಾಕಿ ಬನ್ನಿ ಎಂದು ಒತ್ತಾಯಿಸಿದರು.
ಇನ್ನೆರಡು ದಿನದಲ್ಲಿ ತೀರ್ಮಾನ: ಇದೇ ವೇಳೆ ಮಾತನಾಡಿದ ಹರೀಶ್‍ಗೌಡ, ಪಕ್ಷದ ವರಿಷ್ಟರ ತೀರ್ಮಾನಕ್ಕೆ ನಾವು ಬದ್ಧರಾಗಬೇಕು, ನಮಗೆ ಪಕ್ಷ ಮುಖ್ಯ ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಉನ್ನತ ಶಿಕ್ಷಣ ಖಾತೆ ನೀಡಿರುವುದು ನಮಗೂ ಬೇಸರವುಂಟು ಮಾಡಿದೆ. ವರಿಷ್ಟರು ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡಲಿದ್ದಾರೆ. ಅಲ್ಲಿಯವರೆಗೆ ನೀವು ಯಾವುದೇ ದುಡುಕಿನ ನಿರ್ಧಾರ ಮಾಡಬಾರದು ಎಂದು ಮನವಿ ಮಾಡಿದರು. ನಂತರ ಕಾರ್ಯಕರ್ತರು ಪ್ರತಿಭಟನೆ ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಮಾಜಿ ಉಪಮೇಯರ್ ಶೈಲೇಂದ್ರ, ಜೆಡಿಎಸ್ ಮುಖಂಡರಾದ ದೂರ ಮಂಜುನಾಥ್, ಮಹೇಶ್, ಹರೀಶ್, ಸೋಮಣ್ಣ, ರುದ್ರ, ಚಂದ್ರಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







